(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 03. ಸ್ಯಾಂಡಲ್ ವುಡ್ ಹೆಸರಾಂತ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನದಿಂದ ಬೇಸತ್ತು ಆತ್ಮಹತ್ಯೆ ಹಾಗೂ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅಪ್ಪು ನಿಧನದ ಬಳಿಕ ಮೃತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಅಪ್ಪುವಿನ ಅಪ್ಪಟ ಅಭಿಮಾನಿಗಳಾಗಿದ್ದ ತುಮಕೂರು ಜಿಲ್ಲೆ ಹೆಬ್ಬೂರು ಹೋಬಳಿಯ ಕೋಡಿಪಾಳ್ಯ ಗ್ರಾಮದ ಭರತ್ (30) ಹಾಗೂ ದಾವಣಗೆರೆ ನಗರದ ವಿಜಯನಗರ ಬಡಾವಣೆಯ ಸಾಯಿ ಮಂದಿರ ಬಳಿಯ ನಿವಾಸಿಯಾದ ಕುಮಾರ(25) ಬುಧವಾರದಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೂ ಮೊದಲು ಸಿಂಧನೂರು ತಾಲೂಕಿನ ಅರಾಪುರದ ಬಸನಗೌಡ (22), ಯಾಪಲಪರ್ವಿಯ ಮುಹಮ್ಮದ್ ರಫಿ (25), ಅಥಣಿ ಪಟ್ಟಣದ ರಾಹುಲ್ ಗಾಡಿವಡ್ಡರ (26), ಬೆಳಗಾವಿಯ ಶಿಂದೋಳ್ಳಿ ಗ್ರಾಮದ ಪರಶುರಾಮ್ ದೇಮಣ್ಣನವರ್, ಬನ್ನೇರುಘಟ್ಟ ಸಮೀಪದ ಶ್ಯಾನುಭೋಗನ ಹಳ್ಳಿಯಲ್ಲಿ ರಾಜೇಂದ್ರ(40), ಕೊಪ್ಪಳದ ಜ್ಞಾನಮೂರ್ತಿ ತಿಮ್ಮಣ್ಣ ಎಂಬವರು ಕೂಡ ಪುನೀತ್ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.