ಮರ್ಧಾಳದಲ್ಲಿ ನಡೆಯುತ್ತಿದೆ ಮದ್ಯದಂಗಡಿ ತೆರೆಯುವ ಹುನ್ನಾರ ► ಪ್ರಬಲಗೊಳ್ಳುತ್ತಿದೆ ಮದ್ಯದಂಗಡಿ ವಿರೋಧಿ ಹೋರಾಟ

(ನ್ಯೂಸ್ ಕಡಬ) newskdaba.com ಕಡಬ, ನ.01. ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಂಟ್ರ ಗ್ರಾಮದ ಮರ್ಧಾಳ ಸಮೀಪ ಚಾಕಟೆಕರೆ ಎಂಬಲ್ಲಿ ಮದ್ಯದಂಗಡಿ ತೆರೆಯುವ ಹುನ್ನಾರ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ತಾಲೂಕು ಪಂಚಾಯತ್ ಸದಸ್ಯೆ ಕುಸುಮಾರವರು ಅಬಕಾರಿ ಇಲಾಖೆಗೆ ಸೂಚಿಸಿದ್ದಾರೆ.

ಅವರು ಪುತ್ತೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿ, ಮರ್ಧಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದೆಂದು ಅಬಕಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಸುಜಾತ್ರವರಲ್ಲಿ ಸೂಚಿಸಿದಾಗ ಅದಕ್ಕುತ್ತರಿಸಿದ ಸುಜಾತ ವೈನ್ ಶಾಪ್ ತೆರೆಯುವ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಾ.ಪಂ. ಸದಸ್ಯ ಗಣೇಶ್ ಕೈಕುರೆ, ಅಬಕಾರಿ ಇಲಾಖೆಯವರಿಗೆ ಈಗ ಯಾವುದೇ ಮಾಹಿತಿ ಬಂದಿಲ್ಲವೆನ್ನುತ್ತಾರೆ. ಕೊನೆಗೆ ಅಲ್ಲಿ ಮದ್ಯದಂಗಡಿಗೆ ಅನುಮತಿ ಕೊಟ್ಟ ಬಳಿಕ ಜಿಲ್ಲಾಧಿಕಾರಿ ಕೊಟ್ಟಿರುವುದು ಎಂದು ಸಮಜಾಯಿಷಿ ನೀಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Also Read  ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 8 ಮಂದಿಯಲ್ಲಿ ಕೋವಿಡ್ ದೃಢ

ಒಂದೆಡೆ ಗ್ರಾಮಸ್ಥರು ಮದ್ಯದಂಗಡಿ ವಿರೋಧಿ ಹೋರಾಟವನ್ನು ಆರಂಭಿಸಿದ್ದು, ಮದ್ಯದಂಗಡಿ ಮುಕ್ತ ಗ್ರಾಮವನ್ನಾಗಿ ಮಾಡಲು ಪಣತೊಟ್ಟಿದ್ದಾರೆ.

ನಾನು ಸರಕಾರಕ್ಕೆ ತೆರಿಗೆ ಕಟ್ಟಿ ವಾಣಿಜ್ಯ ಹಾಗೂ ಕೈಗಾರಿಕಾ ಉದ್ದೇಶಗಳಿಗಾಗಿ ಜಮೀನನ್ನು ಪರಿವರ್ತಿಸಿದ್ದು, ಬಾಡಿಗೆಗೆಂದು ಕಟ್ಟಡಗಳನ್ನು ನಿರ್ಮಿಸುತ್ತಿದ್ದೇನೆ. ನನ್ನ ಕಟ್ಟಡವನ್ನು ಯಾರಿಗೆ ಯಾವ ಉದ್ದೇಶಕ್ಕೆ ಬೇಕಾದರೂ ಬಾಡಿಗೆಗೆ ಕೊಡುವ ಅಧಿಕಾರ ನನಗಿದ್ದು, ಬಾಡಿಗೆ ಕೊಠಡಿ ಅಗತ್ಯವಿದ್ದವರಿಗೆ ನಾನು ಕೊಡುತ್ತೇನೆ.
ಎ.ಪಿ. ಚೆರಿಯನ್
ಜಮೀನು ಮಾಲಕ

ಮರ್ಧಾಳ ಪರಿಸರದಲ್ಲಿ ಮದ್ಯದಂಗಡಿಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಅರ್ಜಿಗಳು ನಮ್ಮ ಇಲಾಖೆಗೆ ಬಂದಿಲ್ಲ. ಈ ಬಗ್ಗೆ ಅರ್ಜಿ ಬರುವುದಾದರೆ ಮೊದಲು ಪುತ್ತೂರು ವೃತ್ತ ಕಛೇರಿಗೆ ಕೊಟ್ಟು ತದನಂತರ ನಾವು ಸ್ಥಳ ಪರಿಶೀಲಿಸಿ ಮೇಲಾಧಿಕಾರಿಗಳಿಗೆ ಕೊಡುವಂತಹ ವರದಿಯ ಆಧಾರದಲ್ಲಿ ಜಿಲ್ಲಾಧಿಕಾರಿಯವರು ಅನುಮತಿಯನ್ನು ನೀಡುತ್ತಾರೆ.
ಸುಬ್ರಹ್ಮಣ್ಯ ಪೈ
ಅಬಕಾರಿ ವೃತ್ತ ನಿರೀಕ್ಷಕರು, ಪುತ್ತೂರು

error: Content is protected !!
Scroll to Top