ಅಸಂವಿಧಾನಿಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಮಾರ್ಚ್

(ನ್ಯೂಸ್ ಕಡಬ) Newskadaba.com ಉಡುಪಿ, ಅ. 29. ಅಸಂವಿಧಾನಿಕವಾಗಿ ಜಾರಿ ಮಾಡಲು ಹೊರಟಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿದ್ಯಾರ್ಥಿಗಳಿಗೆ ಒಪ್ಪಲು ಸಾಧ್ಯವಿಲ್ಲ, ಶೀಘ್ರವೇ ಈ ನೀತಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಬಿಗ್ ಬಝಾರ್ ಬಳಿಯಿಂದ ಕ್ಲಾಕ್ ಟವರ್ ವರೆಗೆ ವಿದ್ಯಾರ್ಥಿಗಳು ಮಾರ್ಚ್ ನಡೆಸಿ ಪ್ರತಿಭಟಿಸಿದರು.

ಮೂರು ದಶಕಗಳ ನಂತರ ಜಾರಿಗೊಳಿಸಲು ಉದ್ದೇಶಿಸಿರುವ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಹೊಸ ಬದಲಾವಣೆಯ ನಿರೀಕ್ಷೆಯಲ್ಲಿದ್ದರು. ಆದರೆ ಈ ನಿರೀಕ್ಷೆಗೆ ತದ್ವಿರುದ್ದವಾಗಿ ವಾಸ್ತವ್ಯತೆಯಿಲ್ಲದ ಜನರನ್ನು ಕನಸಿನ ಲೋಕದಲ್ಲಿ ತೇಲಾಡಿಸುವ ಅಸಮರ್ಪಕ ಹಾಗೂ ಅವೈಜ್ಞಾನಿಕವಾದ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾಗುವ ರೀತಿಯಲ್ಲಿ ಕ್ಯಾಬಿನೆಟ್ ಸಭೆ ಕರೆದು ಲೋಕಸಭೆಯಲ್ಲಾಗಲಿ, ವಿಧಾನಸಭೆಯಲ್ಲಾಗಲಿ ಚರ್ಚೆಗೆ ಒಳಪಡಿಸದೆ ಹಿಂಬದಿ ಬಾಗಿಲಿನ ಮುಖಾಂತರ ಜಾರಿಗೊಳಿಸಿರುವುದರ ಹಿಂದಿರುವ ದುರುದ್ದೇಶವನ್ನು ಕ್ಯಾಂಪಸ್ ಫ್ರಂಟ್ ಅರಿತಿದೆ. ಈ ನೀತಿಯು ಶಿಕ್ಷಣವನ್ನು ಕೇಂದ್ರೀಕರಿಸುವುದರೊಂದಿಗೆ ಖಾಸಗೀಕರಣಕ್ಕೆ ಒತ್ತು ನೀಡುವ ಹಾಗೂ ಶಿಕ್ಷಣವನ್ನು ಕೇಸರೀಕರಣಗೊಳಿಸುವ ಹುನ್ನಾರಹೊಂದಿದೆ. 2016 ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸುಗೊಳಿಸಿದ ಸುಬ್ರಮಣ್ಯಂ ನೇತೃತ್ವದ ಸಮಿತಿಯ ವರದಿಯನ್ನು ಯಾಕಾಗಿ ಸಾರ್ವಜನಿಕಗೊಳಿಸಲಿಲ್ಲ ಹಾಗೂ ಅವರ ವರದಿಯ ಅಭಿಪ್ರಾಯಗಳನ್ನು ಯಾಕಾಗಿ ಪರಿಗಣಿಸಲಿಲ್ಲ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.

ತದನಂತರ ಕಸ್ತೂರಿ ರಂಗನ್ ರವರ ನೇತೃತ್ವದಲ್ಲಿ ರೂಪಿಸಲಾದ ನೀತಿಯಲ್ಲಿರುವ ತೊಡಕುಗಳ ಕುರಿತು 2019 ರಲ್ಲಿಯೇ ಕ್ಯಾಂಪಸ್ ಫ್ರಂಟ್ ವಿರೋಧ ವ್ಯಕ್ತಪಡಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃಧ್ದಿ ಸಚಿವಾಲಯಕ್ಕೆ ಶಿಫಾರಸ್ಸು ವರದಿ ನೀಡಿತ್ತು. ಆದರೆ ನಮ್ಮ ಹಾಗೂ ಹಲವಾರು ಶಿಕ್ಷಣ ತಜ್ಞರು ನೀಡಿದ ಯಾವ ಅಭಿಪ್ರಾಯಗಳನ್ನು ಸಹ ಪರಿಗಣಿಸದೆ ಸರ್ವಾಧಿಕಾರಿಯಾಗಿ ಕೈಗೊಂಡ ತೀರ್ಮಾನವಾಗಿದೆ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ. ಈ ನೀತಿಯನ್ನು ಜುಲೈ 29, 2020 ರಲ್ಲಿ ಕ್ಯಾಬಿನೆಟ್ ಅನುಮೋದನೆ ಪಡೆದು ಜಾರಿಗೊಳಿಸುವುದರ ಕುರಿತು ಕೇಂದ್ರ ಸರ್ಕಾರ ಹೇಳಿಕೆ ನೀಡಿತ್ತು.

ಈ ನೀತಿಯು ಪ್ರಾದೇಶಿಕತೆಗೆ ಹಾಗೂ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವ ಹುನ್ನಾರವನ್ನರಿತ ತಮಿಳುನಾಡು ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಿದೆ ಹಾಗೂ ಕೇರಳ ಸರ್ಕಾರವು ಇದರ ವಿರುಧ್ದ ಅಭಿಪ್ರಾಯದ ಶಿಫಾರಸ್ಸು ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ ಅದಲ್ಲದೆ ಪಶ್ಚಿಮ ಬಂಗಾಳ ಸರ್ಕಾರವು ತಮ್ಮ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ ಇದರೊಂದಿಗೆ ದೆಹಲಿಯ ಉಪನ್ಯಾಸಕರು ಕೂಡ ಇದರ ವಿರುದ್ದ ಪ್ರತಿಭಟಿಸಿದ್ದಾರೆ. ಇಂತಹ ಗೊಂದಲದ ಗೂಡಾಗಿರುವ ಈ ನೀತಿಯನ್ನು ಇದೀಗ ಕರ್ನಾಟಕದಲ್ಲಿ ಯಾವುದೇ ಚರ್ಚೆ ನಡೆಸದೆ ಜಾರಿಗೊಳಿಸಿರುವುದು ಖಂಡನೀಯ. ಇದೀಗಾಗಲೇ ಕರ್ನಾಟಕದಲ್ಲಿ ಇದರ ವಿರುಧ್ದ ಹಲವಾರು ಹೋರಾಟಗಳು ನಡೆಯುತ್ತಿದ್ದು, ವಿರೋಧ ಪಕ್ಷಗಳು ಕೂಡ ವಿರೋಧ ವ್ಯಕ್ತಪಡಿಸಿದೆ.

ಪ್ರಸ್ತುತ, ಹೊಸ ಶಿಕ್ಷಣ ನೀತಿಯ ಕುರಿತು ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತಿದ್ದರೂ ಹಠಮಾರಿ ಧೋರಣೆಯೊಂದಿಗೆ ಉನ್ನತ ಶಿಕ್ಷಣದಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದ್ದಾರೆ. ರಾಜ್ಯ ಸರಕಾರದ ಈ ಸರ್ವಾಧಿಕಾರದ ನಡೆಯನ್ನು ಕ್ಯಾಂಪಸ್ ಫ್ರಂಟ್ ಎಲ್ಲಾ ರೀತಿಯಲ್ಲೂ ಪ್ರತಿರೋಧಿಸಲಿದೆ. ಇದರ ಕುರಿತು ಚರ್ಚೆ ನಡೆಸಿ ಈ ನೀತಿಯನ್ನು ಹಿಂಪಡೆಯಬೇಕೆಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸುತ್ತಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಲ್ತಾಫ್ ಹೊಸಪೇಟೆ ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರು ನವಾಝ್ ಶೇಕ್, ಜಿಲ್ಲಾ ಅಧ್ಯಕ್ಷರಾದ ಅಸೀಲ್ ಅಕ್ರಮ್, ಕಾರ್ಯದರ್ಶಿ ಸಾದಿಕ್, ಕುಂದಾಪುರ ಅಧ್ಯಕ್ಷರಾದ ಮುಜಾಹಿದ್ ಹಾಗೂ ಕಾರ್ಯದರ್ಶಿ ಸಿಯಾನ್, ಜಿಲ್ಲಾ ಮುಖಂಡರಾದ ಝಂಝಮ್ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group