ಭಾಷಣದಲ್ಲಿ ಬಂಟ ಸಮುದಾಯದ ಹೆಣ್ಣಿನ ಬಗ್ಗೆ ಕೀಳು ಮಾತು | ಚೈತ್ರಾ ಕುಂದಾಪುರ ವಿರುದ್ಧ ಕಡಬ ಬ್ಲಾಕ್ ಕಾಂಗ್ರೆಸ್ ಆಕ್ರೋಶ

ಕಡಬ, ಅ.27. ಸುರತ್ಕಲ್‍ನಲ್ಲಿ ಜರಗಿದ ಹಿಂದೂ ಸಮಾವೇಶದಲ್ಲಿ ಭಾಷಣ ಮಾಡಿದ ಚೈತ್ರಾ ಕುಂದಾಪುರ ಅವರು ಬಂಟ ಸಮುದಾಯದ ಹೆಣ್ಣಿನ ಬಗ್ಗೆ ಮಾನಹಾನಿಕರ ಕೀಳು ಮಾತುಗಳನ್ನಾಡಿರುವುದು ಖಂಡನೀಯ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಬುಧವಾರದಂದು ಕಡಬದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಹಿಂದೂ ಸಮಾವೇಶದಲ್ಲಿ ಭಾಷಣ ಮಾಡುವವರಿಗೆ ಮದುವೆಯ ಪ್ರಾಯ ಕಳೆದ ಬಂಟ ಸಮುದಾಯದ ಹೆಣ್ಣಿನ ವಿಚಾರ ಯಾಕೆ ಬೇಕಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ನಿಂದಿಸುವ ಅಗತ್ಯವಿದೆಯೇ. ಸಭೆಯ ಔಚಿತ್ಯವನ್ನು ಮರೆತು ಸಭಿಕರ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡುವ ಚೈತ್ರಾ ಕುಂದಾಪುರ ಅವರಂತಹ ಭಾಷಣಕಾರರಿಗೆ ಕಡಿವಾಣ ಹಾಕುವ ಕೆಲಸವನ್ನು ಬಿಜೆಪಿಯಲ್ಲಿರುವ ಬಂಟ ಸಮುದಾಯದ ನಾಯಕರು ಮಾಡಬೇಕಿದೆ ಎಂದು ಅವರು ಸಲಹೆ ನೀಡಿದರು. ನೆಲ್ಯಾಡಿಯ ಕಾಂಗ್ರೆಸ್ ಮುಖಂಡ, ದ.ಕ.ಜಿಲ್ಲಾ ಬಂಟರ ಸಂಘದ ಸದಸ್ಯ ಗಂಗಾಧರ ಶೆಟ್ಟಿ ಹೊಸಮನೆ ಅವರು ಮಾತನಾಡಿ ಬಂಟ ಸಮುದಾಯವು ಸಂಘಟನಾತ್ಮಕವಾಗಿ ಬಲವಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಬಂಟ ಸಮುದಾಯದವರು ಮುಂಚೂಣಿ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಬಂಟರ ಸಂಘವು ಬಂಟ ಸಮುದಾಯದ ಅರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣುಮಕ್ಕಳಿಗೆ ಮದುವೆಗೆ ನೆರವು ನೀಡುವುದು ಮುಂತಾದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ಬ್ಯಾಂಕಿಂಗ್, ಆರೋಗ್ಯ, ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಬಂಟ ಸಮುದಾಯದ ಕೊಡುಗೆ ಮಹತ್ತರವಾದುದು ಎಂದರು. ಅಂತಹ ಸಮುದಾಯವನ್ನು ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಸಭೆಯಲ್ಲಿ ಲೇವಡಿ ಮಾಡಿರುವುದನ್ನು ಕಡಬ ಬ್ಲಾಕ್ ಕಾಂಗ್ರೆಸ್‍ನ ಬಂಟ ಸಮುದಾಯದ ಕಾರ್ಯಕರ್ತರು ಬಲವಾಗಿ ಖಂಡಿಸುತ್ತಿದ್ದೇವೆ. ಬಂಟ ಸಮುದಾಯದ ಹೆಣ್ಣಿನ ಕುರಿತು ಮಾನಹಾನಿಕರ ಭಾಷಣ ಮಾಡಿದ ಚೈತ್ರಾ ಕುಂದಾಪುರ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಡಬ ಸಿ.ಎ.ಬ್ಯಾಂಕ್ ನಿರ್ದೇಶಕ ಸತೀಶ್ ನಾೈಕ್ ಮೆಲಿನಮನೆ ಹಾಗೂ ಕಡಬ ಗ್ರಾ.ಪಂ. ಮಾಜಿ ಸದಸ್ಯೆ ಶಾಲಿನಿ ಸತೀಶ್ ನಾೈಕ್ ಉಪಸ್ಥಿತರಿದ್ದರು.

Also Read  ದಿನ ಭವಿಷ್ಯ - ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್

 

error: Content is protected !!
Scroll to Top