(ನ್ಯೂಸ್ ಕಡಬ) Newskadaba.com ಬೆಂಗಳೂರು, ಅ. 27. ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದರೆ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೆ ತೆರಳಿ ನೋಂದಣಿ ಮಾಡಿಸಬೇಕಾಗಿತ್ತು. ವಾಹನ ಮಾಲೀಕರಿಗೆ ಇದೊಂದು ಸವಾಲಿನ ಕೆಲಸವಾಗಿತ್ತು. ಆದರೆ ಈಗ ಸರಕಾ ಈ ಪದ್ಧತಿಯನ್ನು ಬದಲಾಯಿಸಿ ‘ಆನ್ ಲೈನ್’ ಮೂಲಕ ಹೊಸ ವಾಹನ ನೋಂದಣಿಗೆ ಅವಕಾಶ ಮಾಡಿಕೊಟ್ಟು, ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಿದೆ.
ಇದರ ಪ್ರಕಾರ ಹೊಸ ವಾಹನ ಖರೀದಿಯ ಬಳಿಕ ಪ್ರಥಮ ಬಾರಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಕೊಂಡೊಯ್ದು ನೋಂದಣಿ ಮಾಡುವ ಅಗತ್ಯವಿಲ್ಲ. ಬದಲಾಗಿ ವಾಹನದ ವಿವರಗಳನ್ನು ವಾಹನ-4 ಪೋರ್ಟಲ್ ನಲ್ಲಿ ಮಾರಾಟಗಾರರು ನಮೂದಿಸಿ ನಂತರ ನೋಂದಣಿಗೆ ತಗಲುವ ತೆರಿಗೆ ಮತ್ತು ಶುಲ್ಕವನ್ನು ಆನ್ ಲೈನ್ ನಲ್ಲೇ ಪಾವತಿಸಿದರೆ ಅರ್ಜಿ ನೋಂದಣಿಯಾಗುತ್ತದೆ. ಆನ್ ಲೈನ್ ಸ್ವೀಕರಿಸಿದ ಅರ್ಜಿಯನ್ನು ಆನ್ ಲೈನ್ ನಲ್ಲಿಯೇ ಪರಿಶೀಲಿಸಿ, ನೊಂದಣಿ ಪ್ರಾಧಿಕಾರದಿಂದ ಅನುಮೋದನೆಗೊಳ್ಳುತ್ತದೆ. ಮತ್ತು ನೋಂದಾಯಿತ ನಂಬರ್ ಅನ್ನು ನೀಡಲಾಗುತ್ತದೆ. ಜನರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಬೆಂಗಳೂರಿನ ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಪತ್ರಿಕಾ ಪ್ರಕಣೆಯನ್ನು ನೀಡಿದ್ದಾರೆ.