(ನ್ಯೂಸ್ ಕಡಬ) Newskadaba.com ಕಡಬ, ಅ. 27. ಕೃಷಿ ತೋಟಕ್ಕೆ ನಿರಂತರ ಕಾಡಾನೆ ಲಗ್ಗೆ ಇಡುತ್ತಿರುವ ಪರಿಣಾಮ ಕೃಷಿಕರು ಅಪಾರ ನಷ್ಟ ಅನುಭವಿಸುತ್ತಿರುವ ಸ್ಥಿತಿ ತಾಲೂಕಿನ ಸುಬ್ರಹ್ಮಣ್ಯ ಮತ್ತು ಪಂಜ ವಲಯ ಅರಣ್ಯ ವ್ಯಾಪ್ತಿಯ ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮದಲ್ಲಿ ಸಂಭವಿಸುತ್ತಿದೆ.
ಕಳೆದ ಹಲವು ದಿನಗಳಿಂದ ರೆಂಜಿಲಾಡಿ ಗ್ರಾಮದಲ್ಲಿ ಕಾಡಾನೆ ಕೃಷಿ ತೋಟಕ್ಕೆ ದಾಳಿ ನಡೆಸಿ ಹಾನಿಗೈಯುತ್ತಿದೆ. ಎಳುವಾಳೆ ರಾಮಚಂದ್ರ ಗೌಡ ಅವರ ತೋಟಕ್ಕೆ ಕಳೆದ ಹಲವು ದಿನಗಳಿಂದ ಕಾಡಾನೆ ಲಗ್ಗೆ ಇಟ್ಟು 100 ಅಧಿಕ ಬಾಳೆ, 50ಕ್ಕೂ ಅಧಿಕ ಅಡಿಕೆ, ತೆಂಗು ಹಾಗೂ ನೀರಿನ ಪೈಪ್ ಗಳಿಗೆ ಹಾನಿ ಮಾಡಿದೆ. ಕೃಷಿ ಗಿಡಗಳನ್ನು ಪುಡಿಗೈಯುತ್ತಿದೆ. ಘಟನೆಯಲ್ಲಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಘಟನೆಯ ಬಗ್ಗೆ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದ ನಿಡ್ಡೋ, ಬಳ್ಳಕ, ಇಚಿಲಡ್ಕ, ಎಳುವಾಳೆ, ಹೇರ, ಕೊಣಾಜೆ ಭಾಗದಲ್ಲಿ ಕಾಡಾನೆ ನಿರಂತರವಾಗಿ ಸಂಚರಿಸುತ್ತಾ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ತೊಂದರೆ ನೀಡುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ, ಅಲ್ಲದೇ ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.