ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ವತಿಯಿಂದ ‘ಪ್ರೊಪೆಲ್- 2021’ ಸ್ನೇಹ ಸಮ್ಮಿಲನ ಕಾರ್ಯಕ್ರಮ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 25. ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಕರ್ನಾಟಕ ವತಿಯಿಂದ ಪದಾಧಿಕಾರಿಗಳ ‘ಪ್ರೊಪೆಲ್- 2021’ ಸ್ನೇಹ ಸಮ್ಮಿಲನ, ಸಂವಾದ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮವು ನಗರದ ಸ್ಟೇಟ್ ಬ್ಯಾಂಕ್ ಸಮೀಪದ ಕೋಸ್ಟಲ್ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ರಾಜ್ಯಾಧ್ಯಕ್ಷ ಯಾಸಿರ್ ಹಸನ್, ಸಂಘಟನೆಯು ಮಕ್ಕಳ ಶಿಕ್ಷಣಕ್ಕಾಗಿ ಸರ್ವಶಿಕ್ಷಾ ಗ್ರಾಮ, ಸ್ಕೂಲ್ ಚಲೋ ಕಾರ್ಯಕ್ರಮ, ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್ ಶಿಪ್ ಯೋಜನೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ರಕ್ತದ ಅಗತ್ಯವನ್ನು ಪೂರೈಸುವ ನಿಟ್ಟಿನಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಘಟಕಗಳನ್ನು ರಚಿಸಲಾಗಿದ್ದು, ರಕ್ತದಾನಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಇದನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದ್ದು, ರಾಜ್ಯದಲ್ಲಿ 2 ಲಕ್ಷ ಸದಸ್ಯರನ್ನು ಸೇರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

Also Read  ಪೋಳ್ಯ: 74ನೇ ಸ್ವಾತಂತ್ರ್ಯ ದಿನಾಚರಣೆ

ಅದೇ ರೀತಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ನಡೆದ ರಕ್ತದಾನ ಶಿಬಿರಗಳಲ್ಲಿ 129 ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದ್ದು, ಇದರಲ್ಲಿ 8534 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಯಾಸಿರ್ ಹಸನ್ ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಿವೃತ್ತ ಕೆ.ಎ.ಎಸ್ ಅಧಿಕಾರಿ ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ದ.ಕ. ಜಿಲ್ಲಾ ಕಾರ್ಯದರ್ಶಿ ಪ್ರಭಾಕರ್ ಶರ್ಮಾ, ಕೋವಿಡ್ ಸಮಯದಲ್ಲಿ ಸಾಕಷ್ಟು ಬಗೆಯ ಸವಾಲುಗಳನ್ನು ಎದುರಿಸಿದ್ದರೂ, ರಕ್ತದ ಅಭಾವ ಎದುರಾಗದಂತೆ ಕಾರ್ಯ ನಿರ್ವಹಿಸಲಾಗಿತ್ತು. ಅದರಲ್ಲೂ ವಿಶೇಷವಾಗಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಸೇವೆ ಅದ್ವಿತೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೆನ್ಲಾಕ್ ಆಸ್ಪತ್ರೆ ಕೋವಿಡ್ ವಿಭಾಗದ ನೋಡಲ್ ಅಧಿಕಾರಿ ಡಾ. ಶರತ್ ಬಾಬು ಮಾತನಾಡಿ, ಸಂಕಷ್ಟಕ್ಕೆ ನೆರವಾಗುವ ನಿಮ್ಮ ಈ ಉನ್ನತ ಸೇವೆಯು ಪ್ರಶಂಸಾರ್ಹವಾದುದು. ಈ ಸೇವೆ ನಿರಂತರವಾಗಿರಲಿ ಎಂದು ಶುಭ ಹಾರೈಸಿದರು. ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ರಾಜ್ಯ ಸಂಚಾಲಕ ಅಬು ಸಿನಾನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ರಕ್ತದಾನ ಶಿಬಿರವೊಂದರಲ್ಲಿ ರಾಜ್ಯದಲ್ಲೇ ಅತಿಹೆಚ್ಚು 205 ಯುನಿಟ್ ರಕ್ತವನ್ನು ಸಂಗ್ರಹಿಸಿದ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಉಳ್ಳಾಲ ಘಟಕಕ್ಕೆ ಇದೇ ವೇಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ ದ್ವಿತೀಯ ಸ್ಥಾನ ಪಡೆದ ಮಂಗಳೂರು ಗ್ರಾಮಾಂತರ ಪ್ರದೇಶದ ಬಜ್ಪೆ ಘಟಕ ಹಾಗೂ ಅನಂತರದ ಸ್ಥಾನಗಳನ್ನು ಪಡೆದ ಹುಮ್ನಾಬಾದ್ (ಬೀದರ್), ಜೋಕಟ್ಟೆ ಹಾಗೂ ಕಾವೂರು ಘಟಕಗಳ ಪದಾಧಿಕಾರಿಗಳಿಗೂ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Also Read  ಉಡುಪಿ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ➤ ಆರೋಪಿ ನಿರಂಜನ್ ಭಟ್ ಜಾಮೀನು ಅರ್ಜಿ ಹೈಕೋರ್ಟ್‍ನಲ್ಲಿ ತಿರಸ್ಕøತ

error: Content is protected !!
Scroll to Top