(ನ್ಯೂಸ್ ಕಡಬ) Newskadaba.com ಮದುರೈ, ಅ. 23. ಇದುವರೆಗೆ ಒಂದು ರೂಪಾಯಿಗೆ ಸಿಗುತ್ತಿದ್ದ ಬೆಂಕಿ ಪೊಟ್ಟಣದ ಬೆಲೆಯನ್ನು ಡಿಸೆಂಬರ್ ತಿಂಗಳಿನಿಂದ 2 ರೂಪಾಯಿಗೆ ಪರಿಷ್ಕರಿಸಲು ಬೆಂಕಿಪೊಟ್ಟಣ ಉದ್ಯಮದ ಐದು ಪ್ರಮುಖ ಸಂಸ್ಥೆಗಳು ಒಮ್ಮತದ ನಿರ್ಧಾರ ಕೈಗೊಂಡಿವೆ. 2007ರಲ್ಲಿ ಬೆಂಕಿಪೊಟ್ಟಣದ ದರವನ್ನು 50 ಪೈಸೆಯಿಂದ 1 ರೂಪಾಯಿಗೆ ಹೆಚ್ಚಿಸಲಾಗಿತ್ತು. ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್‌ನ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಚ್ಚಾ ವಸ್ತುಗಳ ದರ ಹೆಚ್ಚಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಉದ್ಯಮ ಪ್ರತಿನಿಧಿಗಳು ಸಮರ್ಥನೆ ನೀಡಿದ್ದಾರೆ.
ಬೆಂಕಿ ಪೊಟ್ಟಣ ತಯಾರಿಸಲು 14 ಕಚ್ಚಾವಸ್ತುಗಳು ಬೇಕಾಗುತ್ತವೆ. ಪ್ರತಿ ಕೆಜಿ ಕೆಂಪು ರಂಜಕದ ದರ 425 ರೂಪಾಯಿಯಿಂದ 810 ರೂಪಾಯಿಗೆ ಹೆಚ್ಚಿದೆ. ಮೇಣದ ಬೆಲೆ ರೂ. 58ರಿಂದ 80ಕ್ಕೆ, ಹೊರ ಪೊಟ್ಟಣ ಬೋರ್ಡ್ ದರ 36ರಿಂದ 55 ರೂಪಾಯಿಗೆ, ಒಳಪೊಟ್ಟಣ ಬೋರ್ಡ್ ದರ 32ರಿಂದ 58ಕ್ಕೆ ಹೆಚ್ಚಿದೆ. ಕಾಗದ, ಬಿದಿರಿನ ಪಟ್ಟಿ, ಪೊಟ್ಯಾಶಿಯಂ ಕ್ಲೋರೇಟ್ ಮತ್ತು ಗಂಧಕದ ಬೆಲೆ ಕೂಡಾ ಅಕ್ಟೋಬರ್ 10ರಿಂದ ಹೆಚ್ಚಿವೆ. ಹೆಚ್ಚುತ್ತಿರುವ ಡೀಸೆಲ್ ಬೆಲೆ ಕೂಡಾ ಹೊರೆಯಾಗಿ ಪರಿಣಮಿಸಿದೆ ಎಂದು ಉದ್ಯಮ ಮೂಲಗಳು ಹೇಳಿವೆ. ತಲಾ 50 ಬೆಂಕಿ ಕಡ್ಡಿಗಳು ಇರುವ 600 ಬೆಂಕಿ ಪೊಟ್ಟಣಗಳನ್ನು ಉತ್ಪಾದಕರು 270 ರಿಂದ 300 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇದೀಗ ಪ್ರತಿ ಘಟಕದ ಬೆಲೆ ಶೇಕಡ 60ರಷ್ಟು ಹೆಚ್ಚಳವಾಗಲಿದ್ದು, 430-480 ರೂಪಾಯಿ ಆಗಲಿದೆ. ಇದರ ಜತೆಗೆ ಶೇಕಡ 12ರಷ್ಟು ಜಿಎಸ್‌ಟಿ ಮತ್ತು ಸಾಗಾಣಿಕೆ ವೆಚ್ಚ ಸೇರುತ್ತದೆ ಎಂದು ರಾಷ್ಟ್ರೀಯ ಸಣ್ಣ ಬೆಂಕಿಕೊಟ್ಟಣ ಉತ್ಪಾದಕರ ಸಂಘದ ಕಾರ್ಯದರ್ಶಿ ವಿ.ಎಸ್.ಸೇತುರಾತಿನಮ್ ಹೇಳಿದ್ದಾರೆ.