ಗಾಂಧಿವಿಚಾರ ವೇದಿಕೆಯಿಂದ “ಮಾಸದ ಸಂವಾದ” ಅರವಿಂದ ಮಹರ್ಷಿಗಳ ಬಗ್ಗೆ ಉಪನ್ಯಾಸ ➤ ವಿಪರೀತವಾದ ಯಾವತ್ತೂ ಅಪಾಯವೇ- ಧೀರೇನ್ ಪರಮಲೆ

(ನ್ಯೂಸ್ ಕಡಬ) Newskadaba.com ಪಂಜ, ಅ. 11. ಯಾವುದೇ ವಿಚಾರಗಳು ವಿಪರೀತವಾದರೆ ಅದರಿಂದಲೇ ಹಾನಿಯಾಗುತ್ತದೆ ಎನ್ನುವುದನ್ನು ಮಹರ್ಷಿ ಅರವಿಂದರು ಹೇಳಿದ್ದರು, ಅಲ್ಲದೇ ಧರ್ಮ, ಜಾತಿ ಸೇರಿದಂತೆ ಯಾವುದೇ ಆದರೂ ವಿಪರೀತವಾದರೆ ಒಂದು ದಿನ ಅದರಿಂದಲೇ ಹೊಡೆತ, ಅದರಿಂದಲೇ ನಾಶ ನಿಶ್ಚಿತ ಎನ್ನುವುದನ್ನು ಮಹರ್ಷಿಗಳು ಹೇಳಿದ್ದರು ಎಂದು ಲೀಡರ್‌ ಎಕ್ಸಲೆನ್ಸ್‌ ಸೊಲ್ಯೂಶನ್‌ನ ಮುಖ್ಯಾಧಿಕಾರಿ, ಧಾರ್ಮಿಕ ಚಿಂತಕ ಧೀರೇನ್‌ ಪರಮಲೆ ಹೇಳಿದರು.

ಅವರು ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ವತಿಯಿಂದ ಪಂಜದ ಜಾಕೆ ಪದ್ಮನಾಭ ಗೌಡ ಅವರ ಮನೆಯ ವಠಾರದಲ್ಲಿ ಶನಿವಾರ ನಡೆದ “ಮಾಸದ ಸಂವಾದ” ಕಾರ್ಯಕ್ರಮದಲ್ಲಿ “ಶ್ರೀ ಅರವಿಂದ ದರ್ಶನ” ಉಪನ್ಯಾಸ ಕಾರ್ಯಕ್ರಮ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.


ಯಾವತ್ತೂ ಗೊತ್ತಿಲ್ಲ ಎನ್ನುವುದೇ ಜ್ಞಾನದ ಬಾಗಿಲು ತೆರೆಯುವುದು ಗೊತ್ತಿದೆ ಎನ್ನುವುದು ಜ್ಞಾನದ ಬಾಗಿಲು ಹಾಕಿದಂತೆಯೇ. ಯಾವುದೇ ಸಂಗತಿಗಳು ನನಗೆ ಗೊತ್ತಿದೆ ಎಂದರೆ ಅದರಾಚೆಗಿನ ಸಂಗತಿಗಳು ತಿಳಿಯಲು ಸಾಧ್ಯವಾಗುವುದಿಲ್ಲ ಎಂದ ಅವರು ಸೇವೆ ಎನ್ನುವುದರ ಬಗ್ಗೆ ಅರವಿಂದರು ಬಹಳ ಎಚ್ಚರಿಕೆಯನ್ನು ಹೇಳಿದ್ದಾರೆ, ಸೇವೆ ಯಾವತ್ತೂ ಅವಕಾಶವೇ ಹೊರತು ಅಧಿಕಾರವಲ್ಲ ಎನ್ನುವುದು ತಿಳಿಯಬೇಕು. ಯಾವತ್ತೂ ಒಂದು ಯುಗದ ಅಂತ್ಯದ ಮೊದಲು ಇಡೀ ವ್ಯವಸ್ಥೆ ಕಲುಷಿತವಾಗುತ್ತದೆ, ಸುಳ್ಳುಗಳೇ ವಿಜೃಂಭಿಸುತ್ತದೆ, ಎಲ್ಲೂ ದಿಕ್ಕಿಲ್ಲ ಎಂದೆನಿಸುತ್ತದೆ. ಆ ಕಲುಷಿತವಾದ ವಾತಾವರಣದಲ್ಲಿ ಬೆಳಕೊಂದು ಹರಿಯುತ್ತದೆ, ಅದು ಬದಲಾವಣೆಯಾಗುತ್ತದೆ, ಅಲ್ಲಿ ಪ್ಯೂರಿಟಿ ಲಭ್ಯವಾಗುತ್ತದೆ. ಇದು ಪರಿಸರವೂ ಹೇಳಿದೆ, ಅರವಿಂದರು ಇದನ್ನು ಅಂದು ದಾಖಲಿಸಿದ್ದರು, ಇಂದು ಆ ಯುಗ ಹತ್ತಿರವಾಗುತ್ತಿದೆ. ಬದಲಾವಣೆ ದಾರಿಗಳು ಯಾವತ್ತೂ ನಿಧಾನವೇ ಆಗಿರುತ್ತದೆ ಆದರೆ ಪರಿಣಾಮಕಾರಿಯಾಗಿರುತ್ತದೆ ಎಂದು ಧೀರೇನ್‌ ಹೇಳಿದರು. ಅರವಿಂದ ಮಹರ್ಷಿಗಳ ಬಗ್ಗೆ ತಿಳಿದಷ್ಟು ಅಪಾರ ಜ್ಞಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

Also Read  ಮಂಗಳೂರು: ಪೆಟ್ರೋಲ್ ಪಂಪ್ ಬಳಿ ಕಾರಿಗೆ ಹಠಾತ್ ಬೆಂಕಿ

ಸಭಾಧ್ಯಕ್ಷತೆಯನ್ನು ವಹಿಸಿದ್ದ ವಿಧಾನಪರಿಷತ್‌ ಮಾಜಿ ಸದಸ್ಯ, ಗಾಂಧಿ ವಿಚಾರ ವೇದಿಕೆಯ ಮಾತೃಸಮಿತಿ ಉಪಾಧ್ಯಕ್ಷ ವಿನಯಚಂದ್ರ ಕಿಲಂಗೋಡಿ ಮಾತನಾಡಿ, ಅರವಿಂದ ಮಹರ್ಷಿಗಳ ಚಿಂತನೆಗಳು ಸಮಾಜಕ್ಕೆ ಹೊಸದಿಕ್ಕು ನೀಡಿತ್ತು. ಅರವಿಂದರು ಅಂತರ್ಯುಗದ ಬಗ್ಗೆ ಹೇಳಿದ್ದರು. ಸತ್ಯಯುಗದ ಪರಿವರ್ತನೆ, ಸಾಕ್ಷಾತ್ಕಾರದ ಬಗ್ಗೆ ಅರವಿಂದರು ತಿಳಿಸಿದ್ದರು ಎಂದರು. ವೇದಿಕೆಯಲ್ಲಿ ಮಾತೃಸಮಿತಿ ಉಪಾಧ್ಯಕ್ಷ ಅಚ್ಚುತ ಮಲ್ಕಜೆ, ರಫೀಕ್‌ ಐವತ್ತೊಕ್ಲು, ಧರ್ಮಪಾಲ ಗೌಡ ಜಾಕೆ ಉಪಸ್ಥಿತರಿದ್ದರು. ಇದೇ ಸಂದರ್ಭ ಸೇವಾ ಕಾರ್ಯಗಳಿಗಾಗಿ ರಜಿತ್‌ ಭಟ್‌ ಪಂಜ ದಂಪತಿಗಳು ಹಾಗೂ ಯುವತೇಜಸ್ಸು ಟ್ರಸ್ಟ್‌ಗೆ ಕೃತಜ್ಞತೆ ಸಲ್ಲಿಸಲಾಯಿತು. ಗಾಂಧಿ ವಿಚಾರ ವೇದಿಕೆಯ ಪಂಜ ವಲಯಾಧ್ಯಕ್ಷರನ್ನಾಗಿ ಭೀಶ್ಮಕ್‌ ಜಾಕೆ ಅವರನ್ನು ಘೋಷಣೆ ಮಾಡಲಾಯಿತು. ಗಾಂಧಿ ವಿಚಾರ ವೇದಿಕೆಯ ಉದ್ದೇಶ ಹಾಗೂ ಸಂಘಟನೆಯ ಬಗ್ಗೆ ಅರವಿಂದ ಚೊಕ್ಕಾಡಿ ಮಾಹಿತಿ ನೀಡಿದರು. ಧರ್ಮಪಾಲ ಗೌಡ ಜಾಕೆ ಸ್ವಾಗತಿಸಿ, ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮೀಶ ಗಬ್ಲಡ್ಕ ಪ್ರಸ್ತಾವನೆಗೈದರು. ಗಾಂಧಿ ವಿಚಾರ ವೇದಿಕೆಯ ಮಾತೃಸಮಿತಿ ಉಪಾಧ್ಯಕ್ಷ ರಫೀಕ್‌ ಐವತ್ತೊಕ್ಲು ವಂದಿಸಿದರು. ಗಾಂಧಿ ವಿಚಾರ ವೇದಿಕೆಯ ಸುಳ್ಯ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್‌ ಪುಚ್ಚಪ್ಪಾಡಿ ನಿರೂಪಿಸಿದರು.

Also Read  ಕಡ್ಯ ಕೊಣಾಜೆ: ಕಬಡ್ಡಿ ಪಂದ್ಯಾಟ

error: Content is protected !!
Scroll to Top