ಮೈಂದಡ್ಕ ಮೈದಾನ ಗ್ರಾ.ಪಂ.ಗೆ ಹಸ್ತಾಂತರ ➤ ದಾರಿಯನ್ನು ಯಥಾಸ್ಥಿತಿಯಲ್ಲಿ ಇಡುವಂತೆ ಆದೇಶ

ಉಪ್ಪಿನಂಗಡಿ, ಅ.05. ಇಲ್ಲಿನ ೩೪ ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಮೈಂದಡ್ಕ ಎಂಬಲ್ಲಿ ಕಂದಾಯ ಇಲಾಖೆಯ ಅಧೀನದಲ್ಲಿದ್ದ ೦.೫೭ ಎಕ್ರೆ ಭೂಮಿಯನ್ನು ಸಾರ್ವಜನಿಕ ಆಟದ ಮೈದಾನವನ್ನಾಗಿ ಬಳಸಿಕೊಳ್ಳಲು ಸ್ಥಳೀಯ ಗ್ರಾ.ಪಂ. ಅಧೀನಕ್ಕೆ ಒಪ್ಪಿಸಿ ಪುತ್ತೂರು ಸಹಾಯಕ ಕಮಿಷನರ್ ಆದೇಶ ಹೊರಡಿಸಿದ್ದು, ಈ ಜಮೀನಿನಲ್ಲಿ ಊರ್ಜಿತವಿರುವ ರಸ್ತೆಯನ್ನು ಆತಂಕಿಸತಕ್ಕದ್ದಲ್ಲವೆಂದು ಸ್ಪಷ್ಟವಾಗಿ ಆದೇಶದಲ್ಲಿ ತಿಳಿಸಿದ್ದಾರೆ.

ಮೈಂದಡ್ಕದಲ್ಲಿರುವ ೮೮/೧ ಸರ್ವೆ ನಂಬರ್‌ನಲ್ಲಿ ಸುಮಾರು ಎರಡು ಎಕ್ರೆಯಷ್ಟು ಸ್ಥಳವು ಅನಿಲ್ ಮಿನೇಜಸ್ ಎಂಬವರ ಖದೀಮ ವರ್ಗದ ಕುಮ್ಕಿಯಾಗಿದ್ದು, ಅದರಲ್ಲಿ ೦.೫೫ ಎಕ್ರೆ ಜಾಗವು ಮೈದಾನಕ್ಕೆ ಪ್ರಸಕ್ತವಾದ ಸ್ಥಳವಾಗಿತ್ತು. ಗ್ರಾಮಕ್ಕೊಂದು ಆಟದ ಮೈದಾನ ಬೇಕು. ಇದು ಸಾರ್ವಜನಿಕರ ಉಪಯೋಗಕ್ಕೆ ಬರಬೇಕೆಂಬ ಉದ್ದೇಶದಿಂದ ೨೦೧೫ರಲ್ಲಿ ಈ ಕುಮ್ಕಿ ಜಾಗದಲ್ಲಿ ೦.೫೫ ಎಕ್ರೆ ಸ್ಥಳವನ್ನು ಸಾರ್ವಜನಿಕ ಮೈದಾನಕ್ಕೆ ಬಿಟ್ಟುಕೊಡಬೇಕೆಂದು ಜತೀಂದ್ರ ಶೆಟ್ಟಿಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಳಿಕ ನ್ಯಾಯಾಲಯದಲ್ಲಿ ಅನಿಲ್ ಮಿನೇಜಸ್ ಹಾಗೂ ಜತೀಂದ್ರ ಶೆಟ್ಟಿಯವರು ರಾಜಿ ಡಿಕ್ರಿಯ ಮೂಲಕ ಈ ಪ್ರಕರಣವನ್ನು ಬಗೆಹರಿಸಿದ್ದು, ನ್ಯಾಯಾಲಯವು ಮೈಂದಡ್ಕದಲ್ಲಿರುವ ಆ ಭೂಮಿಯನ್ನು ವಿಭಾಗಿಸಿ ಸರ್ವೆ ನಂಬರ್ ೮೮/೧ ರಲ್ಲಿ ಮೈದಾನಕ್ಕೆ ಪ್ರಸಕ್ತವಾದ ೦.೫೫ ಎಕ್ರೆ ಸ್ಥಳವನ್ನು ಸಾರ್ವಜನಿಕ ಮೈದಾನಕ್ಕೆಂದು ನೀಡಿ ಆದೇಶಿಸಿತ್ತಲ್ಲದೆ, ಮೈದಾನದ ಜಾಗವನ್ನು ನಕ್ಷೆಯಲ್ಲಿ ಸ.ನಂ.೮೮/೧ಪಿ೧ ಎಂದು ವಿಭಾಗಿಸಿ, ಅನಿಲ್ ಮಿನೇಜಸ್ ಅವರ ಕುಮ್ಕಿಯ ಜಾಗವನ್ನು ೮೮/೧ಪಿ೨ ಮುತ್ತು ೯೨/೧ಪಿ೧ಎಂದು ವಿಭಾಗಿಸಿ, ಈ ಜಾಗವನ್ನು ಅನಿಲ್ ಮಿನೇಜಸ್ ಅವರು ಕುಮ್ಕಿಯೆಂದು ಅನುಭವಿಸಲು ಆದೇಶ ನೀಡಿತ್ತು. ಬಳಿಕ ಮೈದಾನದ ಜಾಗವು ಕಂದಾಯ ಇಲಾಖೆಯ ಅಧೀನದಲ್ಲಿದ್ದರೂ, ಅದು ಮೈದಾನಕ್ಕಾಗಿಯೇ ಬಳಕೆಯಾಗುತ್ತಿತ್ತು. ಆದರೆ ೩೪ ನೆಕ್ಕಿಲಾಡಿ ಗ್ರಾ.ಪಂ.ನ ಈಗಿನ ಆಡಳಿತ ಕೆಲವು ತಿಂಗಳ ಹಿಂದೆ ಇಲ್ಲಿ ಜೆಸಿಬಿ ಮೂಲಕ ತೋಡಿನಂತಹ ಚರಂಡಿಯನ್ನು ನಿರ್ಮಿಸಿ ಮೈದಾನಕ್ಕೆ ಈ ಮೊದಲಿನಿಂದಲೇ ಊರ್ಜಿತದಲ್ಲಿದ್ದ ದಾರಿಯನ್ನು ಮುಚ್ಚಿ ಹಾಕಿತ್ತಲ್ಲದೆ, ಮಣ್ಣನ್ನು ಮೈದಾನದ ಸುತ್ತಲೂ ಅಗಲು (ಅಗರಿ)ನಂತೆ ರಾಶಿ ಹಾಕಿತ್ತು.

Also Read  ರಾಷ್ಟ್ರೀಯ ಹೆದ್ದಾರಿಗೆ ಉರುಳಿ ಬಿದ್ದ ಮರ- ವಾಹನ ಸಂಚಾರಕ್ಕೆ ತಡೆ

ಇನ್ನೊಂದು ಬದಿ ಅರಣ್ಯ ಇಲಾಖೆಯ ಜಾಗವನ್ನು ಇಳಿಜಾರುಗೊಳಿಸಿ ಅದರ ಮಣ್ಣನ್ನು ಮೈದಾನಕ್ಕೆ ತಂದು ಅಗಲು ಕಾಮಗಾರಿಯಂತೆ ರಾಶಿ ಹಾಕಿತ್ತು. ಇಲ್ಲಿ ನೀರು ಹೋಗಲು ದಾರಿಯಿಲ್ಲದಂತಾಗಿ ಈ ಜಾಗವು ಮಳೆಗಾಲದಲ್ಲಿ ನೀರು ಶೇಖರಣೆಗೊಂಡು ಕೆರೆಯಂತಾಯಿತ್ತಲ್ಲದೆ, ಈ ನೀರು ಹೋಗಲು ಜಾಗವಿಲ್ಲದೆ, ಮೈದಾನದೊಳಗೆ ರಾಶಿ ಹಾಕಿರುವ ಮಣ್ಣನ್ನು ಕೊಚ್ಚಿಕೊಂಡು ಮೈದಾನದ ಮೂಲಕ ಹರಿಯಿತು. ಇದರಿಂದ ಮೈದಾನ ಹಾಳಾಗುವಂತಾಯಿತು. ಮೈದಾನದ ಸುತ್ತಲೂ ಗ್ರಾ.ಪಂ. ಅವೈಜ್ಞಾನಿಕ ಕಾಮಗಾರಿ ನಡೆಸಿರುವುದು ಹಾಗೂ ಮೈದಾನದೊಳಗೆ ಮಣ್ಣು ರಾಶಿ ಹಾಕಿ ಮೈದಾನವನ್ನು ಹಾಳುಗೆಡವಿರುವುದು, ಊರ್ಜಿತವಿದ್ದ ದಾರಿಯನ್ನು ಮುಚ್ಚಿರುವ ವಿರುದ್ಧ `ನಮ್ಮೂರು- ನೆಕ್ಕಿಲಾಡಿ’ ಅಧ್ಯಕ್ಷ ಜತೀಂದ್ರ ಶೆಟ್ಟಿಯವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.

Also Read  ಕೊರೋನಾ ಎರಡನೇ ಅಲೆ ಹಿನ್ನೆಲೆ ➤ ಮುಂಜಾಗ್ರತಾ ಕ್ರಮ ಪಾಲಿಸದವರ ವಿರುದ್ಧ ಕಾನೂನು ಕ್ರಮ- ಕಡಬ ತಹಶೀಲ್ದಾರ್ ಅನಂತ್ ಶಂಕರ್

ಈ ಅರ್ಜಿಯು ವಿಚಾರಣೆಯಲ್ಲಿದ್ದು, ಎಸಿ, ತಹಶೀಲ್ದಾರ್ ಹಾಗೂ ೩೪ ನೆಕ್ಕಿಲಾಡಿ ಪಿಡಿಒ ಅವರಿಗೆ ನೊಟೀಸ್ ಜಾರಿಯಾಗಿತ್ತು. ಈ ನಡುವೆ ಗ್ರಾ.ಪಂ. ಇದನ್ನು ಆಟದ ಮೈದಾನವನ್ನಾಗಿ ಬಳಸಿಕೊಳ್ಳಲು ಗ್ರಾ.ಪಂ.ಗೆ ಹಸ್ತಾಂತರ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಕೋರಿ ನಿರ್ಣಯ ಕೈಗೊಂಡಿದ್ದು, ಅದಂತೆ ಈ ಆಟದ ಮೈದಾನವನ್ನು ೩೪ ನೆಕ್ಕಿಲಾಡಿ ಗ್ರಾ.ಪಂ.ಗೆ ಹಸ್ತಾಂತರಿಸಲಾಗಿದೆ. ಇದರೊಂದಿಗೆ ಈ ಜಮೀನಿನಲ್ಲಿ ಊರ್ಜಿತವಿರುವ ರಸ್ತೆಯನ್ನು ಆತಂಕಿಸಬಾರದು, ಯಾವುದೇ ಕಾರಣಕ್ಕೂ ಅತಿಕ್ರಮಣಕ್ಕೆ ಎಡೆ ಮಾಡಿಕೊಡಬಾರದು, ಯಾವುದೇ ಸಂದರ್ಭದಲ್ಲಿ ಸರಕಾರಕ್ಕೆ ಅಗತ್ಯವೆನಿಸಿದರೆ ಸೂಚನೆ ನೀಡದೇ ಈ ಜಮೀನನ್ನು ವಾಪನ್ನು ಪಡೆದುಕೊಳ್ಳುವ ಷರತ್ತನ್ನು ಕಾಯ್ದಿರಿಸಿರುವುದು ಸೇರಿದಂತೆ ಹಲವು ಷರತ್ತುಗಳನ್ನು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

 

 

 

error: Content is protected !!
Scroll to Top