(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.14. ರಸ್ತೆ ಬದಿ ನಿಲ್ಲಿಸಿದ್ದ ಲಾರಿಯೊಂದರಿಂದ ಲಕ್ಷಾಂತರ ರೂ. ಮೌಲ್ಯದ ರಬ್ಬರ್‌ಶೀಟ್ ಕಳವುಗೈದ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಿರಾಡಿ ಗ್ರಾಮದ ಮಿತ್ತಮಜಲು ನಿವಾಸಿ ತೋಮಸ್ ಯಾನೆ ರಿಜು(33), ಶಿರಾಡಿ ಗ್ರಾಮದ ಎಡಪ್ಪಾಟ್ ನಿವಾಸಿ ಇ.ಪಿ. ವರ್ಗೀಸ್(48) ಹಾಗೂ ಶಿರಾಡಿ ಗ್ರಾಮದ ಪೇರಮಜಲು ನಿವಾಸಿ ಶೀನಪ್ಪ(46) ಎಂದು ಗುರುತಿಸಲಾಗಿದೆ. ಉಜಿರೆಯಿಂದ ತಮಿಳುನಾಡಿಗೆ ರಬ್ಬರ್ ಶೀಟ್ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಜು.25ರಂದು ಅದರ ಚಾಲಕ ಗುಂಡ್ಯದಲ್ಲಿ ನಿಲ್ಲಿಸಿದ್ದರು. ಮರುದಿನ ಬೆಳಿಗ್ಗೆ ತಮಿಳುನಾಡು ಮೂಲದವರಾದ ಲಾರಿಯ ನಿರ್ವಾಹಕ ಲಾರಿಗೆ ಅಳವಡಿಸಲಾಗಿದ್ದ ಟರ್ಪಾಲ್‌ನಲ್ಲಿ ನಿಂತಿದ್ದ ನೀರು ತೆಗೆಯಲೆಂದು ಲಾರಿಯ ಮೇಲೆ ಹತ್ತಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದರು. ನಿರ್ವಾಹಕನ ಮೃತದೇಹವನ್ನು ಲಾರಿ ಚಾಲಕ ತಮಿಳುನಾಡಿಗೆ ಕೊಂಡೊಯ್ದು ಕುಟುಂಬಸ್ಥರಿಗೆ ಒಪ್ಪಿಸಿ ಮರುದಿನ ಲಾರಿ ನಿಲ್ಲಿಸಿದ್ದ ಗುಂಡ್ಯಕ್ಕೆ ಬಂದ ವೇಳೆ ಲಾರಿಯಿಂದ ಅರ್ಧದಷ್ಟು ರಬ್ಬರ್ ಶೀಟ್ ಕಳವುಗೊಂಡಿರುವುದನ್ನು ಗಮನಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ನಡೆಸಿದ ಉಪ್ಪಿನಂಗಡಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳವುಗೈದ 25 ಕೆ.ಜಿ.ಯ 17 ಬಂಡಲ್ ರಬ್ಬರ್ ಶೀಟ್‌ಗಳು ಹಾಗೂ ರಬ್ಬರ್ ಶೀಟ್ ಸಾಗಿಸಲು ಉಪಯೋಗಿಸಿದ ಜೀಪನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ, ಉಪ್ಪಿನಂಗಡಿ ಠಾಣಾ ಪಿಎಸ್‌ಐ ಕುಮಾರ್ ಕಾಂಬ್ಳೆ, ಸಿಬ್ಬಂದಿಗಳಾದ ಎಎಸ್ಐ ಸೀತಾರಾಮ ಗೌಡ, ಮತ್ತು ಸಿಬ್ಬಂದಿಗಳಾದ ಹೆಚ್.ಸಿ ಹಿತೋಷ್ ಕುಮಾರ್, ಹೆಚ್.ಸಿ ಕೃಷ್ಣಪ್ಪ ನಾಯ್ಕ , ಪಿಸಿ ಯೋಗರಾಜ್ ಪಾಲ್ಗೊಂಡಿದ್ದರು.