(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.14. ಗ್ರಾಹಕರ ಸೋಗಿನಲ್ಲಿ ಪುತ್ತೂರಿನ ಜೋಸ್ ಆಲುಕ್ಕಾಸ್ ಮಳಿಗೆಗೆ ಬಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ದಾವಣಗೆರೆ ಜಿಲ್ಲೆಯ ನಿವಾಸಿಗಳಾದ ಬೀಬಿಜಾನ್, ಹುಸೇನ್ ಬಿ ಹಾಗೂ ಜೈತುಂಬಿ ಎಂದು ಗುರುತಿಸಲಾಗಿದೆ. ಆರೋಪಿಗಳು ಸೆ.1ರಂದು ಜೋಸ್ ಆಲುಕ್ಕಾಸ್‌ಗೆ ಬಂದು ಚಿನ್ನವನ್ನು ಖರೀದಿಸಿದ್ದರು. ಇದೇ ಸಂದರ್ಭದಲ್ಲಿ 2,60,400 ರೂ. ಮೌಲ್ಯದ ಕಿವಿಯ ಚಿನ್ನಾಭರಣವನ್ನು ವಂಚಿಸಿ ಕಳವು ಮಾಡಿಕೊಂಡು ಹೋಗಿದ್ದರು. ಅಲ್ಲದೆ ಖರೀದಿ ಬಿಲ್ಲಿನಲ್ಲಿ ಸುಳ್ಳು ವಿಳಾಸ ಹಾಗೂ ಮೊಬೈಲ್ ಸಂಖ್ಯೆ ನೀಡಿದ್ದರೆನ್ನಲಾಗಿದೆ. ಈ ಕುರಿತು ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿ ಮ್ಯಾನೇಜರ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪುತ್ತೂರಿನ ಬೀರಮಲೆ ಗುಡ್ಡೆಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳವು ಮಾಡಿದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.