ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್‍ನಲ್ಲಿ ಕಡಬದ ಪ್ರಪ್ರಥಮ ಎಕ್ಸ್‍ರೇ ವಿಭಾಗ ಶುಭಾರಂಭ ➤ ತಜ್ಞ ವೈದ್ಯರ ಭೇಟಿಯ ಜೊತೆಗೆ ಎಕ್ಸ್‍ರೇ ಸೇವೆ ಶ್ಲಾಘನೀಯ: ಸಚಿವ ಎಸ್.ಅಂಗಾರ

ಕಡಬ, ಸೆ.12. ಇಲ್ಲಿನ ನಾಡೋಳಿ ಡಯಾಗ್ನಾಸ್ಟಿಕ್ ಸೆಂಟರ್ ನಲ್ಲಿ ಸಾರ್ವಜನಿಕರಿಗೆ ಸಿಗುವ ಸೇವೆಯು ಕಡಬ ತಾಲೂಕಿಗೆ ಒಂದು ಉತ್ತಮ ಬೆಳವಣಿಗೆ ಆಗಿದೆ ಎಂದು ಬಂದರು ಮತ್ತು ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್, ಅಂಗಾರ ಹೇಳಿದರು.

ಅವರು ಭಾನುವಾರದಂದು ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್‍ನಲ್ಲಿ ಕಡಬದಲ್ಲಿ ಪ್ರಪ್ರಥಮ ಬಾರಿಗೆ ಆರಂಭಗೊಂಡ ಎಕ್ಸ್‍ರೇ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಕಡಬ ತಾಲೂಕು ಆಗಿದೆಯಾದರೂ ಕಡಬದಲ್ಲಿ ಇರುವುದು ಸಮುದಾಯ ಆಸ್ಪತ್ರೆಯಾಗಿರುವುದರಿಂದ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ, ಆದುದರಿಂದ ಇಲ್ಲಿ ತಾಲೂಕು ಆಸ್ಪತ್ರೆಯೇ ಮಾಡಬೇಕಾಗುತ್ತದೆ, ಈ ನಿಟ್ಟಿನಲ್ಲಿ ಆರೋಗ್ಯ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು, ಈ ಸಂದರ್ಭದಲ್ಲಿ ಡಯಾಲಿಸ್ ಕೇಂದ್ರವನ್ನು ಸ್ಥಾಪಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು, ತಾಲೂಕು ಕೇಂದ್ರ ಅಭಿವೃದ್ದಿ ಆಗಬೇಕಾದರೆ ಎಲ್ಲ ಸೌಲಭ್ಯಗಳು ನಿರ್ಮಾಣ ಆಗಬೇಕು ಎಂದ ಅವರು ಇಲ್ಲಿನ ನಾಡೋಳಿ ಡಯಾಗ್ನಾಸ್ಟಿಕ್ ಸೆಂಟರ್ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿರುವ ತಜ್ಞ ವೈದ್ಯರುಗಳ ಭೇಟಿ, ಅತ್ಯಾಧುನಿಕ ಎಕ್ಸ್‍ರೇ ಉಪಕರಣಗಳನ್ನು ಅಳವಡಿಸಿರುವುದು ಅವರ ಸೇವೆ ಇನ್ನಷ್ಟು ಹೆಚ್ಚಳವಾಗಲಿ ಎಂದು ಹೇಳಿ ಸಂಸ್ಥೆಗೆ ಶುಭ ಹಾರೈಸಿದರು.

ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ಎನ್.ಕೆ. ಮಾತನಾಡಿ, ಹಲವಾರು ವರ್ಷಗಳಿಂದ ಕಡಬದಲ್ಲಿ ಕಾರ್ಯಾಚರಿಸುತ್ತಿರುವ ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್ ಮಾಲಕ ಕಾಶಿನಾಥ್ ಗೋಗಟೆ ಅವರು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಕಡಬಕ್ಕೆ ವಾರದಲ್ಲಿ ಒಂದು ದಿನ ವಿವಿಧ ವಿಭಾಗಗಳ ತಜ್ಞ ವೈದ್ಯರನ್ನು ಬರುವಂತೆ ಮಾಡಿ ಇಲ್ಲಿಯ ಜನರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ಅಲ್ಲದೆ ಕಡಬಕ್ಕೆ ಅತೀ ಅಗತ್ಯವಾದ ಅತ್ಯಾಧುನಿಕ ಎಕ್ಸ್‍ರೆ ಘಟಕವನ್ನು ಆರಂಬಿಸಿರುವುದು ಇಲ್ಲಿನ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ, ಇತ್ತೀಚ್ಚಿನ ದಿನಗಳಲ್ಲಿ ಯುವಕರು ದೂರದ ಊರುಗಳಲ್ಲಿ ತನ್ನ ಸೇವೆಯನ್ನು ನೀಡುತ್ತಿದ್ದಾರೆ, ಆದರೆ ಕಾಶಿನಾಥ್ ಗೋಗಟೆಯವರು ತಮ್ಮ ಊರಲ್ಲಿ ಇಂತಹ ಸೇವೆ ನೀಡಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾಗಿರುವುದು ಸಂತಸದ ವಿಚಾರ, ಅವರ ಸೇವೆ ಕಡಬದ ಜನತೆಗೆ ಇನ್ನಷ್ಟು ಲಭಿಸಲಿ ಎಂದು ಹೇಳಿದರು.

Also Read  ಕಳವು

ನಿವೃತ್ತ ಜಿಲ್ಲಾ ಅರಣ್ಯಾಧಿಕಾರಿ ಸದಾಶಿವ ಭಟ್, ಚೊಕ್ಕಾಡಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸುಲೋಚನಾ ಗೌಡ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಚಿತ್ರಾ ರಾವ್ ಅವರು ಮಾತನಾಡಿ, ಕಡಬ ಸಮುದಾಯ ಆಸ್ಪತ್ರೆಯಲ್ಲಿ ಸಣ್ಣ ಮಟ್ಟಿನ ಎಕ್ಸ್‍ರೆ ಯಂತ್ರ ಇರುವುದು, ಸಿಬ್ಬಂದಿ ಕೊರತೆಯಿಂದ ಅದನ್ನು ನಿರ್ವಹಿಸಲು ಕೆಲವು ಸಂದರ್ಭಗಳಲ್ಲಿ ತೊಂದರೆಯಾಗುತ್ತಿದೆ, ಈ ವೇಳೆಯಲ್ಲಿ ನಾಡೋಳಿ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ದೊಡ್ಡ ಮಟ್ಟದ ಎಕ್ಸ್‍ರೆ ಪ್ರಾರಂಬಿಸಿರುವುದು ಉತ್ತಮ ಬೆಳವಣಿಗೆ ಆಗಿದೆ, ಸಾರ್ವಜನಿಕರಿಗೆ ಇದರಿಂದ ಪ್ರಯೋಜನ ಸಿಗಲಿ ಎಂದು ಹೇಳಿ ಶುಭ ಹಾರೈಸಿದರು. ಆರ್ಯಭಟ ಪ್ರಶಸ್ತಿ ಪುರಸ್ಕತ ಕರುಣಾಕರ ಗೋಗಟೆ ನಾಡೋಳಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಥೋ ಮೂಳೆ ತಜ್ಞ ಡಾ. ಶ್ರೇಯಸ್ ದೊಡ್ಡಿಹಿತ್ಲು ಅವರು ಎಕ್ಸ್‍ರೇ ಬಗ್ಗೆ ಮಾಹಿತಿ ನೀಡಿದರು. ಮಾಜಿ ಜಿ.ಪ. ಸದಸ್ಯ ಸೈಯದ್ ಮೀರಾ ಸಾಹೇಬ್ ಮಾತನಾಡಿ ಶುಭ ಹಾರೈಸಿದರು.

Also Read  ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ

ಶಿವಪ್ರಸಾದ್ ರೈ ಮೈಲೇರಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾಲಕ ಎನ್. ಕಾಶಿನಾಥ್ ಗೋಗಟೆ ವಂದಿಸಿದರು. ಮಿಹಿರ್ ಗೋಗಟೆ ಪ್ರಾರ್ಥನೆ ಹಾಡಿದರು. ಈ ಸಂದರ್ಭದಲ್ಲಿ ಜಯಂತಿ ಡಿ.ಎಸ್. ಸ್ನೇಹಲ್ ಕೆ, ದೊಡ್ಡಿಹಿತ್ಲು, ವಸುಧಾ ಕೆ. ಗೋಗಟೆ, ಸುಹಾನಿ ಗೋಗಟೆ, ಕೃತಿ ಗೋಗಟೆ, ಕೇದಾರ ಗೋಗಟೆ, ಸವಿತಾಜೋಶಿ, ಚಿದಾನಂದ ಜೋಶಿ ಮುಂಡ್ರೇಲು ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಸೀತಾರಾಮ ಗೌಡ ಪೊಸವಳಿಕೆ, ರಮೇಶ್ ಕಲ್ಪುರೆ, ಇಂಜಿನಿಯರ್ ಬಾಲಕೃಷ್ಣ ಗೌಡ ಡಿ.ಕೆ, ಅಜಿತ್ ಶೆಟ್ಟಿ ಕಡಬ, ಕಿರಣ್ ಗೋಗಟೆ, ಕಡಬ ಲಯನ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಮೋನಪ್ಪ ಗೌಡ ನಾಡೋಳಿ, ಫಯಾಜ್ ಕಡಬ, ಡಾ. ರಾಮ್ ಪ್ರಕಾಶ್, ಡಾ. ಮುರಳಿ ನೆಟ್ಟಣ ಸೇರಿದಂತೆ ಹಲವಾರು ಮಂದಿ ಪ್ರಮುಖರು ಉಪಸ್ಥಿತರಿದ್ದರು.

error: Content is protected !!
Scroll to Top