(ನ್ಯೂಸ್ ಕಡಬ) newskadaba.com ಕಡಬ, ಸೆ.11. ನಮ್ಮ ಪ್ರತಿಯೊಂದು ಆಚರಣೆಯ ಹಿಂದೆಯೂ ತನ್ನದೇ ಆದ ಮಹತ್ವವಿದೆ. ಗಣೇಶನ ರೂಪವೇ ಜೀವನ ಪಾಠ ಕಲಿಸುತ್ತದೆ. ವಿದ್ಯೆ, ಸಾಂಸ್ಕೃತಿಕ ಕ್ಷೇತ್ರ ಪ್ರೋತ್ಸಾಹವೇ ನಿಜವಾದ ಗಣಪನ ಆರಾಧನೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ತಮ್ಮ ಹುಟ್ಟೂರು ಪಾಲ್ತಾಡಿ ಗ್ರಾಮದ ಮಂಜುನಾಥ ನಗರದಲ್ಲಿ ಶ್ರೀ ಗಣೇಶೋತ್ಸವದ ಅಂಗವಾಗಿ ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ ಹಾಗೂ ಶ್ರೀಸಿದ್ದಿ ವಿನಾಯಕ ಸೇವಾ ಸಂಘದ ವತಿಯಿಂದ ನಡೆದ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು. ಸಾರ್ವಜನಿಕ ಆಚರಣೆಗಳಿಂದ ಜನರನ್ನು ಒಗ್ಗೂಡಿಸಲು ಸಾಧ್ಯವಾಗುತ್ತದೆ. ಧಾರ್ಮಿಕತೆಯ ಮೂಲಕ ಸಂಘಟನಾತ್ಮಕವಾಗಿ ಬೆಳೆಯಲು ಆಚರಣೆಗಳು ಪೂರಕ. ಗ್ರಾಮದ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ. ಕೋವಿಡ್ ಸಂಕಷ್ಟ ಕಾಲದಲ್ಲಿ ಜನರ ಆರೋಗ್ಯದ ರಕ್ಷಣೆ ಹಾಗೂ ಧಾರ್ಮಿಕ ಆಚರಣೆಗಳನ್ನು ನಡೆಸುವ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಗಣೇಶನ ಅನುಗ್ರಹದಿಂದ ಎಲ್ಲಾ ಸಂಕಷ್ಟಗಳು ದೂರವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಸಾಧಕರಾದ ವರ್ಷಿಕಾ ರೈ ಬಿ.ಬೈಲಾಡಿ ಬಂಬಿಲ, ದಾಮಿನಿ ಬಂಬಿಲ, ಮಹೇಶ್ ಕುಮಾರ್ ಬರೆಮೇಲು, ರಂಝೀನಾ ಎಂ., ಅಭಿಷೇಕ್ ಅಂಗಡಿಮೂಲೆ, ಅಪೇಕ್ಷಾ ಬಂಬಿಲದೋಳ, ಪಿಯುಸಿ ಸಾಧಕಿ ವೀಣಾಶ್ರೀ ಅಂಗಡಿಮೂಲೆ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚೆನ್ನಾವರ ಕಿ.ಪ್ರಾ.ಶಾಲಾ ಮುಖ್ಯಶಿಕ್ಷಕಿ ಶಾಂತಾ ಕುಮಾರಿ ಎನ್, ರಂಗಭೂಮಿ ಕಲಾವಿದ ಕೃಷ್ಣಪ್ಪ ಬಂಬಿಲ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್, ಮಾಜಿ ಕಾರ್ಯದರ್ಶಿ ಬಾಳಪ್ಪ ಪೂಜಾರಿ ಬಂಬಿಲದೋಳ, ರಾ.ಸ್ವ.ಸೇ.ಸಂಘದ ಗ್ರಾಮಾಂತರ ಸಂಘಚಾಲಕ ಸುಧಾಕರ ರೈ ಕುಂಜಾಡಿ, ಸವಣೂರು ಗ್ರಾ.ಪಂ.ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ, ಸಿದ್ದಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ಈಶ್ವರ ಕೆ.ಎಸ್, ಅಧ್ಯಕ್ಷ ಪ್ರವೀಣ್ ಬಂಬಿಲದೋಳ, ವಿವೇಕಾನಂದ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ, ಅಧ್ಯಕ್ಷ ಹರೀಶ್ ರೈ , ಗ್ರಾ.ಪಂ.ಸದಸ್ಯರಾದ ಸತೀಶ್ ಅಂಗಡಿಮೂಲೆ, ವಿನೋದಾ ರೈ, ಸುಂದರಿ ಬಂಬಿಲ, ಹರಿಕಲಾ ರೈ ಮೊದಲಾದವರಿದ್ದರು.
ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಸ್ವಾಗತಿಸಿ, ಕಾರ್ಯದರ್ಶಿ ಉದಯ ಬಿ.ಆರ್ ವಂದಿಸಿದರು. ಸತ್ಯಪ್ರಕಾಶ್ ಸಾಧಕರ ಪಟ್ಟಿ ವಾಚಿಸಿದರು. ಶಿಕ್ಷಕ ವಿನಯ ಬಂಬಿಲದೋಳ ನಿರೂಪಿಸಿದರು. ಬೆಳಿಗ್ಗೆ ಗಣಪತಿ ಪ್ರತಿಷ್ಟೆ ನಡೆಯಿತು. ಬಳಿಕ ವಿವೇಕಾನಂದ ಯುವಕ ಮಂಡಲದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಹಾಪೂಜೆಯ ಬಳಿಕ ಗೌರಿ ಹೊಳೆಯಲ್ಲಿ ವಿಗ್ರಹದ ಜಲಸ್ತಂಭನ ನಡೆಯಿತು.