ಕಡಬ: ಅಡಿಕೆ ಸುಳಿಕೊಳೆ ರೋಗ ಪತ್ತೆ ➤ ಸಿಪಿಸಿಆರ್ ಐ ವಿಜ್ಞಾನಿಗಳ ತಂಡ ಭೇಟಿ

(ನ್ಯೂಸ್ ಕಡಬ) Newskadaba.com ಕಡಬ, ಸೆ. 08. ತಾಲೂಕಿನ ಪೆರಾಬೆ ಗ್ರಾಮ ಇಡಾಳದ ಅಡಿಕೆ ಬೆಳೆಗಾರ ಸುರೇಶ ಎಂಬವರ ತೋಟದಲ್ಲಿ ಮಹಾಳಿ (ಕಾಯಿ ಕೊಳೆರೋಗ), ಚೆಂಡೆ ಕೊಳೆರೋಗ ಮತ್ತು ಸುಳಿ ಕೊಳೆರೋಗ ಪತ್ತೆಯಾಗಿದ್ದು, ಸಿಪಿಸಿಆರ್.ಐ ವಿಟ್ಲದ ವಿಜ್ಞಾನಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸಿದರು.

ಕಳೆದ ಕೆಲವು ಸಮಯಗಳಿಂದ ಸುರೇಶ್ ಎಂಬವರ ತೋಟದಲ್ಲಿ ಅಡಿಕೆ ಮರಗಳು ಸಿರಿ ಕೊಳೆತು ಸಾಯುತ್ತಿದ್ದವು. ಅಡಿಕೆ ಮರ ಹಳದಿ ಬಣ್ಣಕ್ಕೆ ತಿರುಗಿ ಬಳಿಕ ಮರದ ಕೊಂಬೆ ಮುರಿದು ಮರ ಬೀಳುತ್ತಿತ್ತು. ಈ ಸಮಸ್ಯೆ ಬಗ್ಗೆ ಸಿ.ಪಿ.ಸಿ.ಆರ್.ಐ ವಿಟ್ಲದ ವಿಜ್ಞಾನಿಗಳಿಗೆ ಮಾಹಿತಿ ನೀಡಲಾಗಿತ್ತು. ಮಂಗಳವಾರ ವಿಟ್ಲದ ವಿಜ್ಞಾನಿಗಳಾದ ಡಾ. ಥವಪ್ರಕಾಸ್ ಪಾಂಡಿಯನ್, ಡಾ. ನಾಗರಾಜ, ಎನ್.ಆರ್. ಮತ್ತು ಡಾ. ಭವಿಷ್ಯ ಇವರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಅಧಿಕ ಇಳುವರಿ ನೀಡುತ್ತಿರುವ ಸುಮಂಗಳ ಮತ್ತು ಮೋಹಿತನಗರ್ ತಳಿಗಳಲ್ಲಿ ಮಹಾಳಿ (ಕಾಯಿ ಕೊಳೆರೋಗ), ಚೆಂಡೆ ಕೊಳೆರೋಗ ಮತ್ತು ಸುಳಿ ಕೊಳೆರೋಗವನ್ನು ಗಮನಿಸಲಾಯಿತು. ಅಲ್ಲದೆ, ಪೋಷಕಾಂಶಗಳ ಅಸಮತೋಲನ ಉಂಟಾಗಿ ಸೂಕ್ಷ್ಮ ಪೋಷಕಾಂಶವಾದ ಸತುವಿನ ಕೊರತೆಯನ್ನು ವಿಜ್ಞಾನಿಗಳ ತಂಡ ಗಮನಿಸಿದರು. ಅಡಿಕೆಗೆ ಬಾಧಿಸುವ ಕೊಳೆರೋಗವನ್ನು ಉಂಟುಮಾಡುವ ಫೈಟೋಪ್ತೋರ ಮೀಡೀ ಎನ್ನುವ ಶಿಲೀಂಧ್ರವು ಚಂಡೆಕೊಳೆ ಮತ್ತು ಸುಳಿಕೊಳೆರೋಗವನ್ನು ಉಂಟುಮಾಡುತ್ತದೆ. ಸಾಮಾನ್ಯವಾಗಿ ಇವು ಆಗಸ್ಟ್ ನಂತರದಲ್ಲಿ ಕಂಡುಬಂದರೂ, ಸುರೇಶ್‌ ಅವರ ತೋಟದಲ್ಲಿ ಜುಲೈ ತಿಂಗಳ ಕೊನೆಯಲ್ಲಿ ಕಂಡುಬಂದಿದ್ದು ವಿಶೇಷವಾಗಿದೆ. ಚೆಂಡೆಕೊಳೆ ರೋಗದಲ್ಲಿ ಮೊದಲು ಕುಬೆಯ ಕೆಳ ಭಾಗದ ಎಲೆಗಳು ಹಳದಿಯಾಗುತ್ತದೆ. ನಂತರ ಕ್ರಮೇಣ ಮೇಲ್ಭಾಗದ ಎಲೆಗಳೂ ಹಳದಿಯಾಗಿ ಬಾಗುತ್ತವೆ. ಕೊನೆಗೆ, ಹೊಸ ಎಲೆ ಮತ್ತು ತಿರಿ ಕೂಡಾ ಹಳದಿಯಾಗಿ ಪೂರ್ತಿ ಚೆಂಡೆಯೇ ಮುರಿದು ಬೀಳಬಹುದು. ಸುಳಿ ಕೊಳೆರೋಗದಲ್ಲಿ ಮೊದಲು ಸುಳಿ ಹಳದಿಯಾಗಿ ನಂತರ ಒಣಗಿ ಬಾಗುತ್ತದೆ. ಮೆಲ್ಲನೆ ಎಳೆದಾಗ ಸುಳಿಯು ಹೊರಬರುವುದಲ್ಲದೆ ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಸುಳಿಗೆ ತೊಂದರೆಯಾದ ನಂತರ ಬೆಳವಣಿಗೆಯಾಗದೆ ಮರವು ಸತ್ತು ಹೋಗುತ್ತದೆ. ಸುಳಿಯು ಹಳದಿಯಾದರೆ ಅಥವಾ ಚಂಡೆಯ (ಕುಬೆ) ಕೆಳಭಾಗದ ಎಲೆಗಳು ಹಳದಿಯಾದರೆ ಮುಂದಿನ ಸುತ್ತಿನ ಬೋರ್ಡೋ ಮಿಶ್ರಣವನ್ನು ಗೊನೆಗೆ ಸಿಂಪರಣೆ ಮಾಡುವಾಗ ಕುಬೆಗೆ ಕೂಡ ತಪ್ಪದೆ ಸಿಂಪರಣೆ ಮಾಡಬೇಕು. ಈ ರೀತಿ ರೋಗ ಬಂದು ಸತ್ತು ಹೋದ ಮರಗಳನ್ನು ತೆಗೆದು ತೋಟದಿಂದ ಹೊರ ಹಾಕುವುದು ಒಳ್ಳೆಯದು. ಕಾಂಡವು ಪೊಟಾಷ್ ಆಗರವಾದುದರಿಂದ ಸಾಧ್ಯವಾದರೆ ಸುಟ್ಟು, ಬೂದಿಯನ್ನು ಅಡಿಕೆ ಮರಗಳಿಗೆ ಹಾಕಬಹುದು. ಮುಂದಿನ ವರ್ಷಗಳಲ್ಲಿ ಬೋರ್ಡೋ ಮಿಶ್ರಣವನ್ನು ಗೊನೆಗಳಿಗೆ ಸಿಂಪಡಣೆ ಮಾಡುವಾಗ ಕನಿಷ್ಟ ಎರಡು ಸುತ್ತಿನ ಸಿಂಪರಣೆಯನ್ನು ಕುಬೆಗೆ ಕೂಡ ನೀಡುವುದು ಮುಖ್ಯ. ಕನಿಷ್ಠ, ರೋಗ ಬಂದ ಮರದ ಸುತ್ತ ಮುತ್ತಲಿನ ಮರಗಳ ಕುಬೆಗೆ ಬೋರ್ಡೋ ಮಿಶ್ರಣವನ್ನು ಸಿಂಪರಣೆ ಮಾಡುವುದು ಹಾಗೂ ರೋಗ ಬಂದು ಸತ್ತ ಮರಗಳನ್ನು ನಿರ್ಮೂಲನೆ ಮಾಡುವುದು ಮುಖ್ಯವೆಂದು ರೋಗ ಶಾಸ್ತ್ರಜ್ಞ ಡಾ. ಥವಪ್ರಕಾಸ್ ಪಾಂಡಿಯನ್ ತಿಳಿಸಿದರು.

Also Read  ಜೂ. 18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಆಹ್ವಾನ

ಸಂಕೀರ್ಣ ರಸಗೊಬ್ಬರದ ಬಳಕೆ ಹೆಚ್ಚಾಗಿ ಸೂಕ್ಷ್ಮ ಪೋಷಕಾಂಶವಾದ ಸತುವಿನ ಕೊರತೆಯ ಲಕ್ಷಣವಾದ ಚೆಂಡೆ ಬಾಗುವಿಕೆ, ಒರೆಗೆಣ್ಣು ಮತ್ತು ಮುಂಡುತಿರಿಗೆ ಸಂಕೀರ್ಣ ರಸಗೊಬ್ಬರದ ಬಳಕೆ ಬದಲು ನೇರ ಗೊಬ್ಬರಗಳಾದ ಯೂರಿಯಾ, ರಾಕ್ ಫಾಸ್ಫೇಟ್ ಮತ್ತು ಪೊಟಾಷ್ ಬಳಕೆ ಮಾಡುವಂತೆ ಡಾ. ನಾಗರಾಜ, ಎನ್.ಆರ್ ತಿಳಿಸಿದರು. ಕುರಿಗೊಬ್ಬರ ಬಳಸುವುದಾದರೆ ಕಾಂಪೋಸ್ಟ್ ಮಾಡಿ ಬಳಸಿ, ಜೊತೆಗೆ 200ಗ್ರಾಂ ರಾಕ್ ಫಾಸ್ಫೇಟ್, 220ಗ್ರಾಂ ಯೂರಿಯ ಮತ್ತು 350ಗ್ರಾಂ ಪೊಟಾಷ್ ಬಳಸುವಂತೆ ವಿಜ್ಞಾನಿಗಳು ಸೂಚಿಸಿದರು. ಯೂರಿಯ ಮತ್ತು ಪೊಟಾಷ್ ಗೊಬ್ಬರವನ್ನು ಆದಷ್ಟು ಹೆಚ್ಚು ಕಂತುಗಳಲ್ಲಿ ಹಾಕುವುದು (3-4), ಹಾಗೂ ಸತುವಿನ ಸಲ್ಫೇಟ್ (10ಗ್ರಾಂ) ಮತ್ತು ಬೊರಾಕ್ಸ್ (5ಗ್ರಾಂ) ಗೊಬ್ಬರಗಳನ್ನು ಡಿಸೆಂಬರ್ ತಿಂಗಳಲ್ಲಿ ಬಳಕೆ ಮಾಡುವಂತೆ ಡಾ. ಭವಿಷ್ಯ ತಿಳಿಸಿದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಉಪಸ್ಥಿತರಿದ್ದರು.

Also Read  ರಾಜ್ಯದ ಅರ್ಧ ಕೋಟಿ ಕುಟುಂಬಗಳಿಗೆ ಭರ್ಜರಿ ಗಿಫ್ಟ್‌ ➤ ಗೃಹಜ್ಯೋತಿಯಲ್ಲಿ ಮೂರು ಯೋಜನೆ ವಿಲೀನ

error: Content is protected !!
Scroll to Top