ನಾನು ಪಂಜರದ ಪಕ್ಷಿ, ಇನ್ನು ನನಗಾರು ಗತಿ, ಕೇಳ ಬಯಸುವೆ ನನ್ನ ಕಥೆಯ..? ➤ ವೈರಲ್ ಆಯಿತು ಗಣೇಶ್ ಅನಿಲ ಅವರ ವ್ಯಂಗ್ಯಭರಿತ ಕಥೆ

(ನ್ಯೂಸ್ ಕಡಬ) newskadaba.com ಕಡಬ, ಸೆ.07. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಕಲ್ಲಾಜೆ ಎಂಬಲ್ಲಿ ಕಳೆದ ಸುಮಾರು10 ತಿಂಗಳಿನಿಂದ ರಸ್ತೆಯಲ್ಲೇ ಬಾಕಿಯಾಗಿರುವ ಬೃಹತ್ ಗಾತ್ರದ ಕ್ರೇನ್ ಬಗ್ಗೆ ಅನಿಲ ನಿವಾಸಿ ಗಣೇಶ್ ಎಂಬವರು ಬರೆದಿರುವ ವ್ಯಂಗ್ಯಭರಿತ ಕಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

‘ನಾನು ಪಂಜರದ ಪಕ್ಷಿ, ಇನ್ನು ನನಗಾರು ಗತಿ, ಕೇಳ ಬಯಸುವೆ ನನ್ನ ಕಥೆಯ’ ಎಂಬ ತಲೆಬರಹದಡಿ
‘ಸುಮಾರು ಒಂದು ವರ್ಷದ ಹಿಂದೆ ನನ್ನನ್ನು ದೂರದ ಊರಿಂದ ಈ ಊರಿಗೆ ಕೆಲಸದ ನಿಮಿತ್ತ ಕರೆದು ಕೊಂಡು ಬಂದರು ನನ್ನ ಸಂಗಡಿಗರು. ನಾನು ಈ ಊರಿಗೆ ಬರಬೇಕಾದರೆ ಗುಂಡ್ಯದಿಂದ ಸುಬ್ರಹ್ಮಣ್ಯ ರಸ್ತೆಯಾಗಿ ಬರಬೇಕಾದರೆ ಟಯರ್ ಪಂಕ್ಚರ್ ನನ್ನ ಪಾಲಿನ ಮೊದಲ ಅಡಚಣೆ. ನಾನು ಬರುವಾಗ ನನ್ನ ಮೇಲೆ ಜನ ಜಾತ್ರೆಯಿದ್ದರೂ ಅವರೆಲ್ಲ ಸೇರಿ ನನ್ನನ್ನು ಸರಿಪಡಿಸಿದರು. ಆದರೂ ಎರಡು ದಿನ ವನವಾಸ, ಅಲ್ಲಿಂದ ಮುಂದೆ ಬಂದು ನನ್ನ ಮಾಲೀಕ ವಹಿಸಿಕೊಂಡ ಕೆಲಸ ಕಾರ್ಯ ಮುಗಿಸಿ ನನ್ನೂರಿಗೆ ಬಹಳ ಸಂತೋಷದಿಂದ ಹೊರಟೆ. ಹೊರಟಾಗ ಬಜಕೆರೆ ಎಂಬ ಸ್ಥಳಕ್ಕೆ ತಲುಪಿದಾಗ ನನಗೆ ತೀವ್ರ ಎದೆನೋವು ಕಾಣಿಸಿಕೊಂಡಿತು. ನನ್ನೊಟ್ಟಿಗೆ ಇದ್ದವರೆಲ್ಲ ನನ್ನನ್ನು ಸಮಾಧಾನ ಮಾಡಿ, ನಾಳೆ ಡಾಕ್ಟರ್ ಗಳನ್ನು ಕರೆಸೋಣ ಎಂದರು. ಅದಕ್ಕೂ ನಾನು OK ಅಂದೆ. ಮರುದಿನ ಯಾವನೋ ಒಬ್ಬ ಲೋಕಲ್ ಡಾಕ್ಟರ್ ಬಂದು ನನ್ನ ಹೃದಯದ ಶಸ್ತ್ರ ಚಿಕಿತ್ಸೆ ಆಗಬೇಕೆಂದು ಹೇಳಿ ನನ್ನನ್ನು ಯಾವುದೇ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ಸೇರಿಸದೆ ನೇರವಾಗಿ ದಾರಿ ಮಧ್ಯೆಯೇ ತನ್ನ ಕೆಲಸ ಶುರುವಿಟ್ಟುಕೊಂಡ. ಅರ್ಧದಲ್ಲಿ ಈ ಕೆಲಸ ನನ್ನಿಂದ ಆಗೋದಿಲ್ಲ ಎಂದು ಕೈಚೆಲ್ಲಿ ಕುಳಿತ. ನನ್ನ ಮಾಲೀಕನ ಪರವಾಗಿದ್ದ ಜನ ದೂರದಿಂದ ಡಾಕ್ಟರನ್ನು ಕರೆಸಿ ನಿನ್ನ ಸಮಸ್ಯೆಯನ್ನು ಸರಿಪಡಿಸೋಣ ಎಂದು ಮಾತು ಕೊಟ್ಟು ನನ್ನೊಟ್ಟಿಗೆ ಇದ್ದ ಎಲ್ಲರೂ ಹೋದರೂ ಬಡಪಾಯಿ ಒಬ್ಬನನ್ನು ನನ್ನೊಟ್ಟಿಗೆ ಬಿಟ್ಟರು. ನಾನು ಮತ್ತು ಅವನು ಡಾಕ್ಟರ್ ಈಗ ಬರ್ತಾರೆ, ಮತ್ತೆ ಬರ್ತಾರೆ, ನಾಳೆ ಬರ್ತಾರೆ, ಎರಡು ದಿನ ಬಿಟ್ಟು ಬರ್ತಾರೆ ಅಂತ ಕಾದು ಕಾದು ಸುಸ್ತಾಗಿ ಹೋದೆವು. ಈ ಸಂದರ್ಭದಲ್ಲಿ ನನ್ನಿಂದಾಗಿ ನನ್ನ ಕಣ್ಮುಂದೆಯೇ ಅದೆಷ್ಟು ಭೀಕರ ಅಪಘಾತಗಳು ಶುರು ಆಯಿತು ನೋಡಿ. ಎಲ್ಲ ಪದಕ ಕಾರಣ ನಾನಾಗಿದ್ದೆ ಯಾಕೆಂದರೆ, ನಾನು ರಸ್ತೆಯ ಮಧ್ಯದಲ್ಲೇ ನಿಂತಿದ್ದೆ. ನನ್ನ ದೇಹ ಬೃಹದಾಕಾರವಾಗಿ ಬಂಡೆ ಕಲ್ಲಿನಂತಿತ್ತು. ರಸ್ತೆಯಲ್ಲಿ ಸಂಚರಿಸುವ ಅದೆಷ್ಟೋ ಮಂದಿ ನನ್ನಿಂದಾಗಿ ಸಾವು ನೋವಿಗೆ ಕಾರಣವಾದರು. ಇದನ್ನು ಕಂಡು ನನ್ನೊಟ್ಟಿಗಿದ್ದ ಆ ಬಡಪಾಯಿ ಕೂಡ ಹೆದರಿ ಊರಿಗೆ ಓಡಿ ಹೋದ. ಈಗ ಈ ರಸ್ತೆಯಲ್ಲಿ ನಾನು ಒಂಟಿಯಾಗಿ ಇದ್ದೀನಿ. ನನ್ನ ಮಾಲೀಕನಿಗೆ ಕಾದು ಕಾದು ಸುಸ್ತಾದ ನಾನು ಅವನ ಮೇಲಿನ ನಂಬಿಕೆ ಕಳೆದು ಬಿಟ್ಟೆ. ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಬಾಯಿಯಿಂದ ಬೈಗುಳ ಕೇಳಿ ಕೇಳಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ. ಇದಕ್ಕೆ ನನಗೆ ದಯಾ ಮರಣ ನೀಡಬೇಕೆಂದು ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಗೆ ಮನವಿ ಮಾಡುವುದರೊಂದಿಗೆ ಹಲವು ಜೀವಗಳನ್ನು ಉಳಿಸಲು ಕೇಳಿಕೊಳ್ಳುತ್ತೇನೆ.

Also Read  ಮಹಿಳೆ ಮೇಲೆ ಅತ್ಯಾಚಾರ‌ ಆರೋಪ ➤ ಅವಳಿ ಸಹೋದರರ ತಲೆ ಬೋಳಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು

?️ ಗಣೇಶ ಅನಿಲ

 

 

 

error: Content is protected !!
Scroll to Top