ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲು ಕಡಬ ಬ್ಲಾಕ್ ಕಾಂಗ್ರೆಸ್ ಆಗ್ರಹ ➤ ತಹಶೀಲ್ದಾರ್ ಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಆ.02. ವೀಕೆಂಡ್ ಕರ್ಫ್ಯೂನಿಂದ ಜಿಲ್ಲೆಯ ಜನ ತತ್ತರಿಸಿದ್ದು, ಅನಗತ್ಯವಾಗಿ ಬೀದಿ ಬದಿ ಗೂಡಂಗಡಿ ವ್ಯಾಪಾರಿಗಳು, ಇತರ ವ್ಯಾಪಾರಿಗಳು, ರಿಕ್ಷಾ ಇನ್ನಿತರ ವಾಹನಗಳಿಗೆ ಶನಿವಾರ ಹಾಗೂ ಅದಿತ್ಯವಾರ ಕರ್ಫ್ಯೂ ವಿಧಿಸಿ ವಿವಿಧ ರೀತಿಯಲ್ಲಿ ಜನ ಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡಿ ಬಡ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ರಾಜ್ಯ ಸರಕಾರದ ಕುಟಿಲ ನೀತಿಯ ವಿರುದ್ಧ ಕಡಬ ಬ್ಲಾಕ್ ಕಾಂಗ್ರೇಸ್ ಖಂಡನೆ ವ್ಯಕ್ತಪಡಿಸಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ವ್ಯಾಪಾರಸ್ಥರು ಮಾಡಿದಂತಹ ಮನೆ ಸಾಲ ಅಂಗಡಿ ಸಾಲ, ಮತ್ತು ಬಾಡಿಗೆ, ಇಎಮ್‌ಐ ಕಟ್ಟಲಾಗದಂತಹ ಪರಿಸ್ಥಿತಿಯಲ್ಲಿದ್ದು, ಇದರಿಂದಾಗಿ ದಿನನಿತ್ಯದ ಖರ್ಚಿಗೂ ಸಾಧ್ಯವಿಲ್ಲದೆ ಪರದಾಡುವಂತಾಗಿದೆ. ದೇಶದ ಹಿತಕ್ಕಾಗಿ ಸಂಪೂರ್ಣ ಲಾಕ್ ಡೌನ್ ಸಂದರ್ಭದಲ್ಲಿ ನಾವು ಕೂಡ ಸಹಕರಿಸಿದ್ದೇವೆ. ಈ ರೀತಿ ಅವೈಜ್ಞಾನಿಕ ತಲೆ ಬುಡವಿಲ್ಲದ ಬಂದ್‌ಗೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಕ್ಷಣ ಜಿಲ್ಲಾಧಿಕಾರಿಗಳು ಕರ್ಫ್ಯೂ ವಿಸ್ತರಣೆ ಆದೇಶಕ್ಕೆ ತಡೆಹಾಕಬೇಕೆಂದು ಆಗ್ರಹಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟರೂ ಕೂಲಂಕುಶವಾಗಿ ಪರೀಕ್ಷೆಗೆ ಒಳಪಡಿಸದೆ ಕೋವಿಡ್‌ನಿಂದ ಮೃತಪಟ್ಟಿದ್ದು ಎಂದು ಹೇಳುವಂತದ್ದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಸರಕಾರ ಗಮನ ಹರಿಸಬೇಕು. ಕೋವಿಡ್ ನಿಂದ ಮೃತಪಟ್ಟ ಕುಟುಂಬದವರಿಗೆ ಕನಿಷ್ಠ 5 ಲಕ್ಷ ರೂಪಾಯಿ ಧನ ಪರಿಹಾರ ತಕ್ಷಣ ನೀಡಬೇಕು. ಇದರಲ್ಲಿ ಎಪಿಎಲ್‌, ಬಿಪಿಎಲ್ ಎಂಬ ತಾರತಮ್ಯ ಮಾಡಬಾರದೆಂದು ಅಗಹಿಸುತ್ತೇವೆ. ಅಚ್ಚೇ ದಿನ್ ಹೆಸರಲ್ಲಿ ಅಧಿಕಾರಕ್ಕೆ ಬಂದಂತಹ ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರಕಾರ ದೇಶದ ಜನರನ್ನು ಮರಲುಗೊಳಿಸಿ, ಬೆದರಿಸಿ ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ಜನರನ್ನು ಉದ್ರೇಕಿಸಿ ಲಾಭ ಪಡೆಯುವ ಹುನ್ನಾರ ಇನ್ನು ಮುಂದೆ ನಡೆಯುದಿಲ್ಲ. ಇನ್ನೂ ಕೂಡ ಜನರನ್ನು ನಂಬಿಸಿ ಮೋಸ ಮಾಡುವ ಭಾವನೆಯಿದ್ದರೆ ಅದು ಮೂರ್ಖತನದ ಪರಮಾವಧಿಯೆಂದು ಭಾವಿಸಬೇಕಾಗುತ್ತದೆ. ಅವೈಜ್ಞಾನಿಕ ವೀಕೆಂಡ್ ಕರ್ಫ್ಯೂವನ್ನು ರದ್ದು ಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.

Also Read  ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳ ನಡುವೆ ಘರ್ಷಣೆ

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ.ವರ್ಗೀಸ್, ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಬಳ್ಳೇರಿ, ಅಶ್ರಫ್ ಶೇಡಿಗುಂಡಿ, ಜೋಸ್, ಹಾಜಿ ಹನೀಫ್ ಕೆ.ಎಂ., ಶರೀಫ್ ಎ.ಎಸ್. ಮೊದಲಾದವರು ಉಪಸ್ಥಿತರಿದ್ದರು.

 

 

 

error: Content is protected !!
Scroll to Top