ಕಡಬ: ಪಾಲುದಾರಿಕೆ ಹೆಸರಲ್ಲಿ ಲಕ್ಷಾಂತರ ರೂ. ಎಗರಿಸಿ ಪರಾರಿ ➤ ಹಣ, ಚಿನ್ನ ಕೊಟ್ಟು ಕೈ ಸುಟ್ಟುಕೊಂಡ ವಿವಿಧ ವ್ಯಾಪಾರಿಗಳು

(ನ್ಯೂಸ್ ಕಡಬ) newskadaba.com ಕಡಬ, ಆ.25. ಇತ್ತೀಚೆಗೆ ಶುಭಾರಂಭಗೊಂಡ ಹೊಟೇಲೊಂದರಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯೋರ್ವ ಪಾಲುದಾರಿಕೆಯ ಹೆಸರಿನಲ್ಲಿ ಸ್ಥಳೀಯ ಜನರೊಂದಿಗೆ ಸ್ನೇಹ ಸಂಪಾದಿಸಿ ನಂತರ ಲಕ್ಷಾಂತರ ರೂ. ಹಣವನ್ನು ಹಾಗೂ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿ ಪರಾರಿಯಾಗಿರುವ ಘಟನೆ ಕಡಬದಿಂದ ವರದಿಯಾಗಿದೆ.

ಪರಾರಿಯಾಗಿರುವ ವ್ಯಕ್ತಿಯನ್ನು ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿಯ ರಾಮಮಂದಿರ ಸಮೀಪದ ನಿವಾಸಿ ಎಂ.ಟಿ. ಕರೀಗೌಡ ಎಂಬವರ ಪುತ್ರ ಶರತ್ ಬಾಬು ಸಿ.ಕೆ. ಎಂದು ಗುರುತಿಸಲಾಗಿದೆ. ಈತ ಕಡಬದಲ್ಲಿ ನೂತನವಾಗಿ ಆರಂಭವಾದ ಹೋಟೆಲ್ ಒಂದರಲ್ಲಿ ಅಡುಗೆ ಕೆಲಸಗಾರನಾಗಿ ಸೇರಿಕೊಂಡು ಮಾಲಕರ ಸ್ನೇಹ ಸಂಪಾದಿಸಿ ಮ್ಯಾನೇಜ್‌ಮೆಂಟ್‌ ವರೆಗೂ ಮಾಡಿಕೊಂಡಿದ್ದ. ಈ ನಡುವೆ ಸ್ಥಳೀಯವಾಗಿ ಉನ್ನತ ಸ್ಥಾನದಲ್ಲಿ ಇರುವ ಹಲವಾರು ಜನರನ್ನು ತನ್ನ ಮಾತಿನ ಮೋಡಿ ಮೂಲಕ ವಂಚಿಸಿ ಹಣ, ಚಿನ್ನಾಭರಣಗಳು, ವಾಹನ, ಎಲೆಕ್ಟ್ರಾನಿಕ್ ವಸ್ತುಗಳು ಸೇರಿದಂತೆ ಹತ್ತು ಲಕ್ಷಕ್ಕೂ ಮಿಕ್ಕಿದ ವಸ್ತುಗಳೊಂದಿಗೆ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

Also Read  ಜಡ್ಜ್ ಮನೆಯಲ್ಲಿ ಕಳವು ಇಬ್ಬರು ಖದೀಮರು ಸೆರೆ

ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದ್ದು, ಈತನ ವಿರುದ್ಧ ಹಣ ಕಳೆದುಕೊಂಡವರು ಇದುವರೆಗೂ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಈತ ಪ್ರಸ್ತುತ ವಾಸವಿದ್ದ ಬಾಡಿಗೆ ರೂಂಗೆ ಬೀಗ ಹಾಕಲಾಗಿದೆ. ಈತನ ಬಗ್ಗೆ ಮಾಹಿತಿ ಪಡೆಯಲು ಕಡಬದಲ್ಲಿ ವಂಚನೆಗೊಳಗಾದ ಕೆಲವರು ಮೈಸೂರಿನ ಆತನ ವಿಳಾಸದ ಮನೆಗೆ ಭೇಟಿ ನೀಡಿದ್ದು, ಈತನು ತನ್ನ ಕುಟುಂಬದೊಂದಿಗೆ ಕಳೆದ 10 ವರ್ಷಗಳಿಂದ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ತಿಳಿದು ಬಂದಿದೆ. ಕಡಬದಲ್ಲಿ ಎಷ್ಟು ಜನರಿಗೆ ಈತ ವಂಚನೆ ಮಾಡಿದ್ದಾನೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

Also Read  ಕಡಬ: ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 7 ಸದಸ್ಯರ ಆಯ್ಕೆ

 

 

 

 

error: Content is protected !!
Scroll to Top