ನಾಳೆಯಿಂದ ವರ್ತಕರಿಗೆ, ಚಾಲಕರಿಗೆ ಕೊರೋನಾ ಪರೀಕ್ಷೆ ಕಡ್ಡಾಯ ➤ ಕಡಬ ತಹಶೀಲ್ದಾರ್ ಅನಂತ ಶಂಕರ್ ಸೂಚನೆ

(ನ್ಯೂಸ್ ಕಡಬ) newskadaba.com ಕಡಬ, ಆ.17. ನಾಳೆ (ಆ.18) ಕಡಬದ ವರ್ತಕರಿಗೆ, ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಕಡ್ಡಾಯ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ನಡೆಸುವಂತೆ ಕೊರೋನಾ ಕಾರ್ಯಪಡೆ ಸಭೆಯಲ್ಲಿ ಕಡಬ ತಹಸೀಲ್ದಾರ್ ಅನಂತಶಂಕರ್ ಅವರು ವೈದ್ಯಾಧಿಕಾರಿಗಳಿಗೆ ಮತ್ತು ಕಡಬ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಕಾರ್ಯಪಡೆ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಕಡಬ ಭಾಗದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ಹತೋಟಿಗೆ ತರುವ ಬಗ್ಗೆ ಕೊರೋನಾ ಕಾರ್ಯಪಡೆ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಅಂತೆಯೇ ಹಂತ ಹಂತವಾಗಿ ಎಲ್ಲ ವಿಭಾಗದವರ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ನಡೆಸಲಾಗುತ್ತದೆ. ಪ್ರಾರಂಭದಲ್ಲಿ ನಾಳೆಯಿಂದಲೇ ಪರೀಕ್ಷೆ ಪ್ರಾರಂಭವಾಗಲಿದ್ದು ಕಡಬದ ವರ್ತಕರು ಮತ್ತು ಅಂಗಡಿಯಲ್ಲಿರುವ ಸಿಬ್ಬಂದಿಗಳಿಗೆ ಮತ್ತು ಅಟೋ ರಿಕ್ಷಾ ಹಾಗೂ ವಾಹನ ಚಾಲಕರಿಗೆ ಪರೀಕ್ಷೆ ನಡೆಸಲಾಗುತ್ತದೆ, ಬಳಿಕ ಗ್ರಾಮ ಗ್ರಾಮದಲ್ಲಿಯೂ ಪರೀಕ್ಷೆ ನಡೆಸಲಾಗುತ್ತದೆ, ಯಾರೂ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬಾರದು. ಪೇಟೆಯಲ್ಲಿ ಸಾರ್ವಜನಿಕರೊಂದಿಗೆ ಸದಾ ಸಂಪರ್ಕದಲ್ಲಿರುವ ಅಂಗಡಿ ಮಾಲಕರು ಹಾಗೂ ವಾಹನ ಚಾಲಕರು ತಾವಾಗಿಯೇ ಮುಂದು ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಅಂಗಡಿ ಮಾಲಕರು ಹಾಗೂ ಸಿಬ್ಬಂದಿಗಳು ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆಯೇ ಎಂದು ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಪ್ರತಿ ಅಂಗಡಿಗೆ, ವಾಹನ ಚಾಲಕರನ್ನು ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ, ಈ ಕಾರ್ಯದಲ್ಲಿ ಕೋವಿಡ್ ಕಾರ್ಯಪಡೆಯ ಎಲ್ಲ ಸದಸ್ಯರು ಭಾಗವಹಿಸಬೇಕು ಎಂದು ಅವರು ಹೇಳಿದರು.

Also Read  ಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ರಿಗೆ ಕೋರೋನಾ ಪಾಸಿಟಿವ್

ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿಯವರು ಮಾತನಾಡಿ, ಈ ಹಿಂದೆ ಕೋರೋನಾ ಸೋಂಕಿತರಿಗೆ ಮನೆಯಲ್ಲಿ ಇರಲು ಅವಕಾಶ ನೀಡಿದ್ದರಿಂದ ಅವರು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದು ಇದರಿಂದ ಇನ್ನಷ್ಟು ಜನರಿಗೆ ಸೋಂಕು ಹರಡಲು ಕಾರಣವಾಗಿತ್ತು, ಈ ಹಿನ್ನೆಲೆಯಲ್ಲಿ ಕೋರೋನಾ ಪಾಸಿಟಿವ್ ಬಂದ ವ್ಯಕ್ತಿಯನ್ನು ಕೋವಿಡ್ ಸೆಂಟರ್‌ಗೆ ಕಡ್ಡಾಯವಾಗಿ ದಾಖಲಿಸಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿಯವರು ಆದೇಶ ಮಾಡಿದ್ದಾರೆ. ಆದುದರಿಂದ ಎಲ್ಲರ ಪರೀಕ್ಷೆ ನಡೆಸಿ ಪಾಸಿಟಿವ್ ಬಂದವರನ್ನು ಕೋವಿಡ್ ಸೆಂಟರ್‌ಗೆ ದಾಖಲಿಸಲಾಗುವುದು. ಇದಕ್ಕೆ ಕೊರೋನಾ ಕಾರ್ಯಪಡೆಯ ಎಲ್ಲರೂ ಸಹಕರಿಸಬೇಕು. ಕೊರೋನಾ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ, ಇದು ಜನರಿಗೆ ತೊಂದರೆ ಆಗುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಾವು ಆದಷ್ಟು ಕೋವಿಡ್ ಸೋಂಕಿತರನ್ನು ಮನವೊಲಿಸುವ ಯತ್ನ ಮಾಡುತ್ತಿದ್ದೇವೆ, ಅಧಿಕಾರಿಗಳು ನೀಡುವ ಸೂಚನೆಯನ್ನು ಕೊರೋನಾ ಸೋಂಕಿತರು ಪಾಲಿಸದೆ ಇದ್ದಾಗ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಒಟ್ಟಿನಲ್ಲಿ ಕೊರೋನಾ ನಿರ್ಮೂಲನೆ ಮಾಡಲು ಎಲ್ಲರೂ ಶಕ್ತಿ ಮೀರಿ ಪ್ರಯತ್ನಪಡಬೇಕು ಎಂದು ಅವರು ಹೇಳಿದರು.

Also Read  ಬೆಳ್ಳಾರೆ: ಬುದ್ದಿಮಾಂದ್ಯ ನೇಣು ಬಿಗಿದು ಕೊಂಡು ಆತ್ಮಹತ್ಯೆ

ನಾವು ಪರೀಕ್ಷೆ ಮಾಡುತ್ತೇವೆ ಆದರೆ ಪಾಸಿಟಿವ್ ಬಂದವರನ್ನು ಕೋವಿಡ್ ಸೆಂಟರ್‌ಗೆ ಸೇರಿಸಲು ಕೇವಲ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಸಾಕಾಗುವುದಿಲ್ಲ, ಕಾರ್ಯಪಡೆಯ ಎಲ್ಲರೂ ಪಾಲ್ಗೊಳ್ಳಬೇಕು ಆಗ ಮಾತ್ರ ಯಶಸ್ವಿಯಾಗುತ್ತದೆ, ಹಂತ ಹಂತವಾಗಿ ಕೊರೋನಾ ಪರೀಕ್ಷೆ ನಡೆಸಲು ನಾವು ನಾಳೆಯಿಂದಲೇ ಪ್ರಾರಂಭಿಸುತ್ತೇವೆ ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್ ಹೇಳಿದರು.

ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಕಂದಾಯ ನಿರೀಕ್ಷಕ ಅವಿನ್ ರಂಗತ್ ಮಲೆ, ಕೋವಿಡ್ ನೋಡೆಲ್ ಅಧಿಕಾರಿ ಹರೀಶ್ ಬೆದ್ರಾಜೆ, ಆರೋಗ್ಯ ಸಹಾಯಕಿ ಏಲಿಯಮ್ಮ ಜಾನ್ ಉಪಸ್ಥಿತರಿದ್ದರು. ಕಡಬ ಗ್ರಾ,ಪಂ. ಮಾಜಿ ಅಧ್ಯಕ್ಷರಾದ ಹನೀಫ್ ಕೆ.ಎಂ., ಬಾಬು ಮುಗೇರ, ನಾರಾಯಣ ಪೂಜಾರಿ, ಮಾಜಿ ಸದಸ್ಯರಾದ ಆದಂ ಕುಂಡೋಳಿ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

 

 

error: Content is protected !!
Scroll to Top