ಕೊರೋನಾ ಸೋಂಕಿನ ನಡುವೆ ಬ್ಲಾಕ್ ಫಂಗಸ್ ಭೀತಿ ➤ ಡೆತ್ ನೋಟ್ ಬರೆದಿಟ್ಟು ದಂಪತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.17. ಕೊರೋನಾ ಸೋಂಕಿತ ದಂಪತಿ ಡೆತ್‌ನೋಟ್‌ ಬರೆದಿಟ್ಟು ಅಪಾರ್ಟ್‌ಮೆಂಟ್‌ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದ ಬೈಕಂಪಾಡಿ ಸಮೀಪದ ಚಿತ್ರಾಪುರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ದಂಪತಿಯನ್ನು ಮೂಲತಃ ಪಡುಬಿದ್ರಿ ನಿವಾಸಿಗಳಾದ ಚಿತ್ರಾಪುರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿದ್ದ ಆರ್ಯ ಸುವರ್ಣ(45) ಮತ್ತು ಗುಣ ಸುವರ್ಣ(35) ಎಂದು ಗುರುತಿಸಲಾಗಿದೆ. ಡೆತ್ ನೋಟ್ ಬರೆದಿರುವ ಗಯಣ ಸುವರ್ಣ ‘ನಾನು 14ನೇ ವಯಸ್ಸಿನಿಂದಲೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. 2000ನೇ ಇಸವಿಯಲ್ಲಿ ನಮ್ಮ ಮದುವೆಯಾಗಿದೆ. 2001ರಲ್ಲಿ ಗರ್ಭಿಣಿಯಾಗಿದ್ದಾಗ ನನಗೆ ಸಕ್ಕರೆ ಕಾಯಿಲೆ ಬಾಧಿಸಿತು. ಸಿಝೇರಿಯನ್ ಮಾಡಿಸಿ ಗಂಡು ಮಗುವಾದರೂ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. 2005ರಲ್ಲಿ ಮತ್ತೆ ಗರ್ಭಿಣಿಯಾಗಿದ್ದೆ. ಆದರೂ ಮಾತ್ರೆಯಿಂದ ವ್ಯತಿರಿಕ್ತ ಪರಿಣಾಮವಾಗುತ್ತಿದ್ದಂತೆ ಮತ್ತೆ ಸಮಸ್ಯೆ ಎದುರಾಯಿತು. ಯಾವುದೇ ಮಾತ್ರೆ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಅಂದಿನಿಂದ ಪ್ರತಿನಿತ್ಯ ಎರಡು ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಮಧುಮೇಹ (ಷುಗರ್) ಕಂಟ್ರೋಲ್‌ಗೆ ಬರುತ್ತಿಲ್ಲ. ಈ ಕಾರಣದಿಂದ 2020ರ ಬಳಿಕ ಕೋವಿಡ್ ಬಂದ ಬಳಿಕ ನಾವೆಲ್ಲ ತುಂಬಾ ಜಾಗರೂಕತೆ ತೆಗೆದುಕೊಂಡಿದ್ದೆವು. ಆದರೆ ಸುಮಾರು 10ದಿನಗಳಿಂದ ಕೋವಿಡ್ ನನ್ನನ್ನು ಬಾಧಿಸಿದ್ದು, ಅದು ವಿಕೋಪಕ್ಕೆ ಹೋಗಿ ಬ್ಲಾಕ್ ಫಂಗಸ್ ಭಯ ಕಾಡಿದೆ. ಗಂಡನಿಗೂ 3 ದಿನದಿಂದ ಕೋವಿಡ್ ಲಕ್ಷಣಗಳು ಕಂಡು ಬರುತ್ತಿದೆ. ಈ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ.

Also Read  ಮಹಾಕುಂಭದಲ್ಲಿ ಬಾಂಬ್ ಬೆದರಿಕೆ, ಸೆಕ್ಷನ್‌ 163 ಜಾರಿ

ನನ್ನ ತಂದೆ, ತಾಯಿ ಹಾಗೂ ತಮ್ಮನಿಗೂ ಕೋವಿಡ್ ಸೋಂಕು ತಗುಲಿದ್ದು, ಚೇತರಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ನಮ್ಮ ಅಂತ್ಯಕ್ರಿಯೆಯ ತೊಂದರೆಯನ್ನು ಕೊಡಬಾರದು. ನನಗೆ 2 ಬಾರಿ ಸಿಝೇರಿಯನ್ ಆಗಿ ಮಕ್ಕಳ ಸಮಸ್ಯೆಯಾದರೂ ಎಲ್ಲಿ ಹೋದರೂ ಮಕ್ಕಳ ಬಗ್ಗೆಯೇ ಕೇಳುತ್ತಿದ್ದಾರೆ. ಅದಕ್ಕಾಗಿ ನಾನು ಹೆಚ್ಚು ಯಾರ ಜತೆನೂ ಬೆರೆಯುತ್ತಿರಲಿಲ್ಲ. ಹಿಂದೂ ಸಂಘಟನೆಯ ಶರಣ್ ಪಂಪ್‌ವೆಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರಲ್ಲಿ ವಿನಂತಿ ಮಾಡುವುದೇನೆಂದರೆ ನಮ್ಮನ್ನು ಹಿಂದೂ ಸಂಪ್ರದಾಯ ಪ್ರಕಾರ ಅಂತ್ಯಸಂಸ್ಕಾರ ನಡೆಸಿ. ಅಂತ್ಯಕ್ರಿಯೆಗೆಂದು 1ಲಕ್ಷ ರೂ. ಇಟ್ಟಿದ್ದೇವೆ. ನಮ್ಮ ಮನೆಯಲ್ಲಿರುವ ವಸ್ತುಗಳನ್ನು ಬಡವರಿಗೆ ನೀಡಿ. ಈ ಮನೆಯ ಮಾಲೀಕರಲ್ಲೂ ಕ್ಷಮೆ ಕೇಳುತ್ತೇವೆ’ ಎಂದು ಬರೆದಿದ್ದಾರೆ.

 

ಆತ್ಮಹತ್ಯೆಗೆ ಮುನ್ನ ಆರ್ಯ ಸುವರ್ಣ ಅವರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್‌ಗೆ ವಾಯ್ಸ್ ಮೆಸೇಜ್ ಕಳಿಸಿದ್ದು, ‘ದಂಪತಿಗಳಾದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ’ ಎಂದು ಹೇಳಿದ್ದರು. ಇದಕ್ಕೆ ಕಮಿಷನರ್ ಕೂಡಲೇ ಪ್ರತಿಕ್ರಿಯೆ ನೀಡಿ ‘ಆತ್ಮಹತ್ಯೆಯಂತ ದುಸ್ಸಾಹಸ ಮಾಡಬೇಡಿ. ನಿಮ್ಮ ಏನೇ ಕಷ್ಟವಿದ್ದರೂ ನಾನು ಸ್ಪಂದಿಸುತ್ತೇನೆ. ದಯವಿಟ್ಟು ಆತ್ಮಹತ್ಯೆ ಮಾಡಬೇಡಿ’ ಎಂದು ವಿನಂತಿ ಮಾಡಿ ಕೂಡಲೇ ಎಲ್ಲ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಿದ್ದಾರೆ. ದಂಪತಿಯ ಮಾಹಿತಿ ಪಡೆದ ಸುರತ್ಕಲ್ ಪೊಲೀಸರು ಅಪಾರ್ಟ್‌ಮೆಂಟ್‌ಗೆ ಹೋದಾಗ ದಂಪತಿ ಆತ್ಮಹತ್ಯೆಗೈದಿರುವುದು ಕಂಡು ಬಂದಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಸುರತ್ಕಲ್, ಪಣಂಬೂರು ಇನ್‌ಸ್ಪೆಕ್ಟರ್ ಸ್ಥಳಕ್ಕೆ ತೆರಳಿದ್ದಾರೆ.

Also Read  ➤ಮಂಗಳೂರು ಹಲವು ಪ್ರಖರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಬಂಧನ

 

 

 

error: Content is protected !!
Scroll to Top