(ನ್ಯೂಸ್ ಕಡಬ) newskadaba.com ನವದೆಹಲಿ, ಆ.13. ನಿಮ್ಮ ಮೊಬೈಲ್ ಫೋನ್ ಗೆ ಕೆಲವೊಮ್ಮೆ ವಿವಿಧ ವಂಚಕರಿಂದ ಸಂದೇಶ ಬರುವುದು ಸಾಮಾನ್ಯವಾಗಿದ್ದು, ಈ ವಂಚನಾ ಜಾಲದಲ್ಲಿ ನೀವು ಸಿಲುಕಿಕೊಂಡರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಆಗೋದು ಮಾತ್ರ ಗ್ಯಾರಂಟಿ.
ನಿಮ್ಮ ಮೊಬೈಲ್ ಗೆ ‘ಆತ್ಮೀಯ ಗ್ರಾಹಕರೇ, ನಿಮ್ಮ xxxxxx ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಲಾಗುವುದು’ ಅಥವಾ ಯಾವುದೋ ಖಾತೆ ಸಂಖ್ಯೆಯನ್ನು ನಮೂದಿಸಿ ವಿವಿಧ ರೀತಿಯ ಮೆಸೇಜ್ ಬರುವ ಸಾಧ್ಯತೆಗಳಿರುತ್ತವೆ. ನೀವು ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣವೇ ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗಿನ್ ಆಗಿ ಆನ್‌ಲೈನ್ ಬ್ಯಾಂಕಿಂಗ್ ಲಾಗಿನ್ ವಿವರಗಳು ಮತ್ತು ಮೊಬೈಲ್ ಸಂಖ್ಯೆಯನ್ನು ವಂಚಕರು ಕದಿಯುವ ಸಂಭವವಿರುತ್ತದೆ. ಈ ಮೂಲಕ ನಿಮ್ಮ ಖಾತೆಯಲ್ಲಿರುವ ಹಣವನ್ನು ಸುಲಭವಾಗಿ ವರ್ಗಾಯಿಸಲಾಗುತ್ತದೆ.
ದಿನಂಪ್ರತಿ ಹೊಸ ಹೊಸ ವರಸೆಯಲ್ಲಿ ವಂಚಕರು ತಮ್ಮ ಚಾಕಚಕ್ಯತೆಯನ್ನು ತೋರುತ್ತಿದ್ದು, ಕೆಲವೊಮ್ಮೆ ಯಾವುದಾದರೂ ಒಟಿಪಿ ಯನ್ನು ನಿಮ್ಮ ಮೊಬೈಲ್ ಗೆ ಕಳುಹಿಸಿ ಆ ಬಳಿಕ ಕರೆ ಮಾಡಿ ವಿಚಾರಿಸುತ್ತಾರೆ. ಅಕಸ್ಮಾತ್ ನೀವು ಒಟಿಪಿಯನ್ನು ನೀಡಿದ್ದೇ ಆದರೆ ನಿಮ್ಮ ಖಾತೆಗೆ ಕನ್ನ ಬೀಳೋದು ಪಕ್ಕಾ. ಇನ್ಮುಂದೆ ಇಂತಹ ಯಾವುದೇ ವಂಚನಾ ಜಾಲದಲ್ಲಿ ನೀವು ಬೀಳದೆ ಇರುವ ಹಾಗೆ ಹುಷಾರಾಗಿರಿ.
ಇನ್ನೂ ಮುಂದುವರಿದು ಹೊಸ ತಂತ್ರಗಾರಿಕೆಯನ್ನು ವಂಚಕರು ಆರಂಭಿಸಿದ್ದು, ಪ್ರತಿಷ್ಠಿತ ಆನ್‌ಲೈನ್ ಶಾಪಿಂಗ್ ಕಂಪೆನಿಗಳ ಹೆಸರನ್ನು ಹೋಲುವ ವೆಬ್‌ಸೈಟ್ ಲಿಂಕನ್ನು ಕಳುಹಿಸಿ ಕಡಿಮೆ ಬೆಲೆಗೆ ವಿವಿಧ ವಸ್ತುಗಳನ್ನು ಖರೀದಿಸಬಹುದು ಎಂದು ನಂಬಿಸುತ್ತಾರೆ. ಆ ಲಿಂಕ್ ಗೆ ಕ್ಲಿಕ್ ಮಾಡಿದರೆ ಹತ್ತು ಜನಕ್ಕೆ ಶೇರ್ ಮಾಡುವಂತೆ ತಿಳಿಸಲಾಗುತ್ತದೆ. ಈ ಲಿಂಕ್ ಮೂಲಕ ವೈರಸ್ ಹರಿಯ ಬಿಟ್ಟು ಎಲ್ಲಾ ಬಳಕೆದಾರರ ವಿವರಗಳನ್ನು ಪಡೆಯುವುದು ಇದರ ಉದ್ದೇಶವಾಗಿದೆ. ಉದಾಹರಣೆಗೆ ಈ ಹಿಂದೆ ಪಿಂಕ್ ವಾಟ್ಸ್ಅಪ್ ಎಂಬ ಲಿಂಕ್ ಹರಿದಾಡಿದ್ದು, ಅದನ್ನು ಕ್ಲಿಕ್ ಮಾಡಿದವರ ಮೊಬೈಲ್ ನಲ್ಲಿದ್ದ ಎಲ್ಲಾ ವಾಟ್ಸ್ಅಪ್ ಗ್ರೂಪ್ ಗೆ ಸರಣಿ ಸಂದೇಶ ರವಾನೆಯಾಗುತ್ತಿತ್ತು. ಈ ಪಿಂಕ್ ವಾಟ್ಸ್ಅಪ್ ಗೋಜಿಗೆ ಬಿದ್ದವರು ಪಟ್ಟ ಪಾಡು ಹೇಳತೀರದ್ದಾಗಿದೆ.
ಯಾವುದೇ ಕಾರಣಕ್ಕೂ ಮೇಲೆ ಹೇಳಿದಂತಹ ಅನಗತ್ಯ ಸಂದೇಶಗಳನ್ನು ಕ್ಲಿಕ್ ಮಾಡಬೇಡಿ. ಯಾಕೆಂದರೆ ನಮ್ಮ ಖಾಸಗಿತನವನ್ನು ನಾವೇ ಇನ್ನೊಬ್ಬರಿಗೆ ಕಳುಹಿಸಿಕೊಟ್ಟು ಕೈ ಸುಟ್ಟುಕೊಂಡ ಹಾಗೆ ಆಗುವ ಸಂಭವವಿದೆ.