(ನ್ಯೂಸ್ ಕಡಬ) newskadaba.com ಕಡಬ, ಆ.12. ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ 94 ಸಿ ಯೋಜನೆಯಡಿಯಲ್ಲಿ ಮಂಜೂರಾಗಿದ್ದ ಹಕ್ಕುಪತ್ರವನ್ನು ರದ್ದು ಪಡಿಸಿ ಎರಡು ವರ್ಷವಾಗಿದ್ದು, ಈ ನಡುವೆ ಅದೇ ಜಮೀನಿನನ್ನು ಅಧಿಕಾರಿಗಳು ಮರು ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ಇದೀಗ ಮಾಧ್ಯಮ ವರದಿಗೆ ಎಚ್ಚೆತ್ತ ಇಲಾಖೆಯು ಮತ್ತೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಲ್ಲಂತಡ್ಕ ಹಿಂದೂ ರುದ್ರಭೂಮಿ ಸಮೀಪ ಸರಕಾರಿ ಜಾಗದಲ್ಲಿ ಎರಡು ವರ್ಷಗಳ ಹಿಂದೆ ಏಕಾಏಕಿ ಏಳು ಅಕ್ರಮ ಕಟ್ಟಡ ನಿರ್ಮಾಣಕ್ಕೆ ಪ್ರಾರಂಭಿಸಲಾಗಿತ್ತು. ಇದರಿಂದ ಆಶ್ಚರ್ಯಗೊಂಡಿದ್ದ ಸ್ಥಳೀಯರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಮಾಧ್ಯಮಗಳು ಕೂಡಾ ವರದಿ ಮಾಡಿದ್ದವು. ಅಂದಿನ ಸಹಾಯಕ ಆಯುಕ್ತರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಅಲ್ಲಿ ಇಬ್ಬರಿಗೆ ನಿಯಮ ಬಾಹಿರವಾಗಿ 94 ಸಿ ಯೋಜನೆಯಡಿಯಲ್ಲಿ ನಿವೇಶನ ಮಂಜೂರು ಮಾಡಿರುವುದು ಬೆಳಕಿಗೆ ಬಂದಿತ್ತು. ಉಳಿದಂತೆ ಐದು ಜನ ಯಾವುದೇ ದಾಖಲೆಗಳಿಲ್ಲದೆ ಕಟ್ಟಡ ನಿರ್ಮಾಣಕ್ಕೆ ಇಳಿದಿದ್ದರು. ಇದನ್ನು ತಕ್ಷಣ ತೆರವುಗೊಳಿಸುವಂತೆ ಸ್ಥಳಿಯಾಡಳಿತಕ್ಕೆ ಆದೇಶಿಸಿ, ಅಕ್ರಮವಾಗಿ 94 ಸಿ ಯಲ್ಲಿ ಮಂಜೂರಾದ ಭೂಮಿಯ ಹಕ್ಕು ಪತ್ರವನ್ನು ರದ್ದು ಪಡಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದ್ದರು. ಬಳಿಕ ಅಕ್ರಮ ಕಟ್ಟಡಗಳ ತೆರವು ಕಾರ್ಯ ನಡೆದಿತ್ತು.
ತಪ್ಪು ಮಾಹಿತಿ ನೀಡಿ ಹಕ್ಕು ಪತ್ರ ಪಡೆಯಲಾಗಿದೆ ಎಂದು ತಹಶಿಲ್ದಾರರು ಮಂಜೂರಾಗಿದ್ದ ನಿವೇಶನದ ಹಕ್ಕು ಪತ್ರವನ್ನು ರದ್ದು ಪಡಿಸಿದ್ದರು. ಈ ಮಧ್ಯೆ ಆಕ್ರಮಿತರು ರದ್ದು ಪಡಿಸಲಾಗಿದ್ದ ಮಂಜೂರಾತಿ ಆದೇಶವನ್ನು ಪರಿಶೀಲಿಸಿ ನಮಗೆ ಮರು ಮಂಜೂರು ಮಾಡಬೇಕೆಂದು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ. ಈಗಾಗಲೇ ರದ್ದು ಪಡಿಸಿದ ಎರಡು 94 ಸಿ ನಿವೇಶನ ಹಾಗೂ ಉಳಿದಂತೆ ಐದು ಜನರಿಗೆ ನಿವೇಶನ ಮಂಜೂರು ಮಾಡುವಂತೆ ಆದೇಶ ನೀಡಲಾಗಿದೆ ಎಂದು ಹೇಳಲಾಗಿದ್ದು, ವಿಷಯ ತಿಳಿದ ಸಚಿವ ಎಸ್. ಅಂಗಾರರವರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಹಿನ್ನೆಲೆಯಲ್ಲಿ ಇದೀಗ ಮತ್ತೆ ಆದೇಶ ರದ್ದಾಗಿದೆ ಎಂದು ತಿಳಿದುಬಂದಿದೆ.