ನೀವು ಪಿಯುಸಿ, ಡಿಗ್ರೀ ಪಾಸ್ ಆಗಿದ್ದೀರಾ..? ➤ ಪೊಲೀಸ್ ಇಲಾಖೆಗೆ ಸೇರಲು ಸುವರ್ಣಾವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಆ.08. ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಗೆ ಪೊಲೀಸ್ ಇಲಾಖೆಗೆ ಸೇರಲು ಸದವಕಾಶ ಕೂಡಿಬಂದಿದ್ದು, ಇದೇ ಮೊದಲ ಬಾರಿಗೆ ಮಂಗಳೂರು ನಗರ ಕಮಿಷನರ್ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ.

ಹೌದು. ಜಿಲ್ಲೆಯ ಅಭ್ಯರ್ಥಿಗಳು ಪೊಲೀಸ್ ಇಲಾಖೆಗೆ ಸೇರಲು ನಿರಾಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಒಂದು ತಿಂಗಳ ಕಾಲ ಉಚಿತ ತರಬೇತಿ ಕಾರ್ಯಾಗಾರ ನಡೆಸುವ ಮೂಲಕ ಜಿಲ್ಲೆಯ ಯುವಜನತೆಗೆ ಪೊಲೀಸ್ ಇಲಾಖೆಗೆ ಸೇರಲು ಪ್ರೋತ್ಸಾಹ ನೀಡಲಾಗುತ್ತಿದ್ದು, ಪೊಲೀಸ್ ಇಲಾಖೆಗೆ ಇತ್ತೀಚೆಗೆ ಸೇರ್ಪಡೆಗೊಂಡ ನುರಿತ ಪಿಎಸ್ಐ ಹಾಗೂ ಸಿಬ್ಬಂದಿಯ ತಂಡ ಒಂದು ತಿಂಗಳ ಕಾಲ ತರಬೇತಿ ನೀಡಲಿದೆ. ಆಸಕ್ತ ಅಭ್ಯರ್ಥಿಗಳು ನಾಳೆ (ಆ.9)ಯಿಂದ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ನೋಂದಣಿ ಡೆಸ್ಕ್​​ನಲ್ಲಿ‌ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಹೆಸರು‌ ನೋಂದಣಿ ಮಾಡಿಕೊಳ್ಳಬಹುದಾಗಿದೆ.

Also Read  ತೋಟಗಾರಿಕಾ ಇಲಾಖೆಯಿಂದ ಅಡಿಕೆ ಮತ್ತು ತೆಂಗಿನ ಕೀಟರೋಗ ನಿಯಂತ್ರಣಕ್ಕೆ ಸಹಾಯಧನ


ವಿಳಾಸದ ಬಗ್ಗೆ ಅಧಿಕೃತ ದಾಖಲೆಗಳನ್ನು ಸಲ್ಲಿಸುವುದು, ಪಿಎಸ್ಐ/ಪಿಸಿ ನೇಮಕಾತಿಯ ಇಟಿ/ಪಿಎಸ್​ಟಿನಲ್ಲಿ ಉತ್ತೀರ್ಣಗೊಂಡ ದಾಖಲಾತಿ ಸಲ್ಲಿಸುವುದು, ಆರ್​ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ದ.ಕ.ಜಿಲ್ಲೆಯವರಿಗೆ ಮೊದಲ ಆದ್ಯತೆ ಕಲ್ಪಿಸಲಾಗಿದ್ದು, ಅಭ್ಯರ್ಥಿಗಳು ಬಾರದೇ ಇದ್ದಲ್ಲಿ ಬಳಿಕ ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯವರನ್ನು ಪರಿಗಣಿಸಲಾಗುತ್ತದೆ. 30 ದಿನ ಕಾರ್ಯಾಗಾರ ನಡೆಯಲಿದ್ದು, ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಇರುತ್ತದೆ‌. ಮೊದಲ ಹಂತದಲ್ಲಿ 100 ಅಭ್ಯರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಊಟ, ವಸತಿ ಸೌಲಭ್ಯ ಉಚಿತವಾಗಿ ಇಲಾಖೆಯಿಂದಲೇ ದೊರೆಯಲಿದೆ. ಪ್ರತಿದಿನ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ತರಬೇತಿ, ತರಗತಿ, ಓದುವಿಕೆ ಇರಲಿದ್ದು, ಅಭ್ಯರ್ಥಿಗಳು ತರಬೇತಿ ಸಮಯದಲ್ಲಿ ಕಡ್ಡಾಯವಾಗಿ ನಿಗದಿತ ಸ್ಥಳದಲ್ಲಿ ವಾಸ್ತವ್ಯವಿರಬೇಕು, ಅವಶ್ಯಕ ಸಾಮಗ್ರಿಗಳನ್ನು ಅಭ್ಯರ್ಥಿಗಳೇ ತರಬೇಕು. ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವವರಿಗೆ ಅಲೋಶಿಯಸ್ ಕಾಲೇಜಿನಲ್ಲಿ ವಾಸ್ತವ್ಯ, ತರಗತಿ ಹಾಗೂ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಾಗುತ್ತದೆ.

Also Read  ಉಳ್ಳಾಲ: ಗೃಹ ಪ್ರವೇಶದ ಮನೆಯಲ್ಲಿ ಕಳ್ಳನ ಕೈಚಳಕ

ಆಸಕ್ತರು ಮಂಗಳೂರು ಕಮಿಷನರೇಟ್ ಘಟಕದ ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

 

 

error: Content is protected !!
Scroll to Top