(ನ್ಯೂಸ್ ಕಡಬ) newskadaba.com ಕಡಬ, ಆ.02. ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮೂಲತಃ ಕಡಬ ನಿವಾಸಿ ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸವಿರುವ ಸೈಮನ್ ಸಿ.ಎ. ಸೋಮವಾರದಂದು ಅಧಿಕಾರ ವಹಿಸಿಕೊಂಡಿದ್ದಾರೆ.
ಕಡಬದ ಹಳೇಸ್ಟೇಷನ್ ನಿವಾಸಿಯಾಗಿದ್ದ ಇವರು ಬಳಿಕ ಉಪ್ಪಿನಂಗಡಿಯ 34 ನೇ ನೆಕ್ಕಿಲಾಡಿಯಲ್ಲಿ ವಾಸ ಮಾಡುತ್ತಿದ್ದಾರೆ. ಉಪ್ಪಿನಂಗಡಿಯಲ್ಲಿ ತನ್ನ ವ್ಯಾಸಂಗವನ್ನು ಆರಂಭಿಸಿದ ಇವರು, ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪೂರೈಸಿ ಮಂಗಳೂರಿನ ಎಸ್ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಆರಂಭಿಸಿದ್ದರು. 2002ರಲ್ಲಿ ರಾಜ್ಯ ಸಿಐಡಿ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಆಗಿ ಪೊಲೀಸ್ ಸೇವೆ ಆರಂಭಿಸಿದ್ದ ಇವರು ನಂತರ ಪದೋನ್ನತಿಗೊಂಡು ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿ ಆ ಬಳಿಕ ಭಡ್ತಿಗೊಂಡು 2011 ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. 2020ರಲ್ಲಿ ಎಸ್ಪಿಯಾಗಿ ಪದೋನ್ನತಿಗೊಂಡು ಇಂದು ಭ್ರಷ್ಟಾಚಾರ ನಿಗ್ರಹ ದಳದ ನಾಲ್ಕು ಜಿಲ್ಲೆಗಳ ಎಸ್ಪಿಯಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಇವರ ತಂದೆ ಸಿಸಿ ಅಬ್ರಹಾಂ ಕೂಡಾ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.