ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು ➤ ಚಾಲಕ ಮೃತ್ಯು

(ನ್ಯೂಸ್ ಕಡಬ) Newskadaba.com ಉಡುಪಿ, ಜು. 19. ನಿಯಂತ್ರಣ ತಪ್ಪಿದ ಕಾರೊಂದು ಚರಂಡಿಗೆ ಬಿದ್ದ ಪರಿಣಾಮ ಗ್ಯಾರೇಜ್ ಮಾಲಕರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಚ್ಚಿಲ-ಮುದರಂಗಡಿ ರಸ್ತೆಯ ಎಲ್ಲೂರು ಸಮೀಪದ ಪಣಿಯೂರು ಪೆಜತ್ತಕಟ್ಟೆ ಎಂಬಲ್ಲಿ ನಡೆದಿದೆ.

ಮೃತರನ್ನು ಕಾಪು ಕೊಪ್ಪಲಂಗಡಿ ನಿವಾಸಿ ರವೀಂದ್ರ ಪೂಜಾರಿ (38) ಎಂದು ಗುರುತಿಸಲಾಗಿದೆ. ಉದ್ಯಾವರದ ಬಲಾಯಿಪಾದೆ ಎಂಬಲ್ಲಿ ಗ್ಯಾರೇಜ್ ನಡೆಸುತ್ತಿದ್ದ ಇವರು ಆದಿತ್ಯವಾರದಂದು ರಾತ್ರಿ ಎಲ್ಲೂರಿಗೆ ತೆರಳಿದ್ದು, ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಚರಂಡಿ ಮತ್ತು ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ರವೀಂದ್ರ ಅವರು ಕಾರಿನಿಂದ ಹೊರಕ್ಕೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಈ ವೇಳೆ ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

Scroll to Top