(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಅ.30. ‘ರಾಜ್ಯದ ಖಜಾನೆ ಲೂಟಿ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶ ಕಂಡರಿಯದ ಭ್ರಷ್ಟ. ಅವರ ನೇತೃತ್ವದ ರಾಜ್ಯ ಸರಕಾರದ ಆಯುಷ್ಯ ಮುಗಿಯುತ್ತಿದೆ’ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಬಿಐ ಎಫ್‌ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಕೆ.ಜೆ.ಜಾರ್ಜ್ ರಾಜೀನಾಮೆ ಪಡೆಯಬೇಕಿತ್ತು. ಆದರೆ, ಚಾರ್ಜ್ ಶೀಟ್ ಆಗುವವರೆಗೂ ಕಾಯುತ್ತೇವೆಂಬ ಮೂಲಕ ಕೋರ್ಟ್ ಆದೇಶ ಉಲ್ಲಂಘಿಸುತ್ತಿದ್ದಾರೆ ಎಂದು ಗುಡುಗಿದರು.
ಸಿಬಿಐ ಎಫ್‌ಐಆರ್ ದಾಖಲಿಸಿದ ಕೂಡಲೇ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಈಗಲೂ ಕಾಲ ಮಿಂಚಿಲ್ಲ ಜಾರ್ಜ್ ಅವರಿಗೆ ನೈತಿಕತೆ ಇದ್ದರೆ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಅಧಿವೇಶನದಲ್ಲಿ ಚರ್ಚೆ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಹಗರಣ ಮುಚ್ಚಿಹಾಕಲು ಅಡ್ಡಹಾದಿ ಹಿಡಿದಿದ್ದು, ರಾಜ್ಯ ಸರಕಾರ ಕನಿಷ್ಠ ಕಳಕಳಿ ಇದ್ದರೆ ಕೂಡಲೇ ಕಲ್ಲಿದ್ದಲು ಕಂಪೆನಿಗೆ ಹಣ ಪಾವತಿ ಸಂಬಂಧದ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ. ಆದರೆ, ಆ ಕೆಲಸ ಮಾಡುವುದು ಬಿಟ್ಟು ಬಿಜೆಪಿ ನಾಯಕರ ವಿರುದ್ಧ ಸುಳ್ಳು ಆರೋಪ ಮಾಡುವ ತಂತ್ರ ನಡೆಸುತ್ತಿದ್ದು, ನ.13ರಿಂದ ಆರಂಭಗೊಳ್ಳಲಿರುವ ಬೆಳಗಾವಿ ವಿಧಾನ ಮಂಡಲ ಅಧಿವೇಶನದಲ್ಲಿ ಇದಕ್ಕೆ ಬಿಜೆಪಿ ತಕ್ಕ ಉತ್ತರ ನೀಡಲಿದೆ ಎಂದು ಯಡಿಯೂರಪ್ಪ ಇದೇ ವೇಳೆ ಎಚ್ಚರಿಕೆ ನೀಡಿದರು.