(ನ್ಯೂಸ್ ಕಡಬ) Newskadaba.com ಬೆಂಗಳೂರು, ಜೂ. 27. ಅವಿವಾಹಿತ ಹಾಗೂ ವಿಚ್ಛೇದಿತ ಪುರುಷರಿಗೆ ಫೇಸ್‌ಬುಕ್ ಹಾಗೂ ವಾಟ್ಸಾಪ್ ಮೂಲಕ ವಿಡಿಯೋ ಕಾಲ್ ಮಾಡಿ ಹಣಕ್ಕಾಗಿ ಬೇಡಿಕೆ ಇಡುವ ಹೊಸ ಜಾಲವೊಂದು ಕಾರ್ಯನಿರ್ವಹಿಸುತ್ತಿದೆ. ಇವತ್ತು ನನ್ನ ಸ್ನೇಹಿತನಿಗೆ ಫೇಸ್‌ಬುಕ್‌ನಲ್ಲಿ ಅಪರಿಚಿತ ಪೂಜಾ ಕುಮಾರಿ ಎಂಬ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಹಾಗೂ ಮೆಸೇಂಜರ್ ಮೂಲಕ “ಹಾಯ್” ಎಂಬ ಮೆಸೇಜ್ ಬಂತು. ಇದಕ್ಕೆ ಉತ್ತರಿಸಿದ ಐದೇ ನಿಮಿಷದಲ್ಲಿ ವಾಟ್ಸಾಪ್ ಮುಖಾಂತರ ಆತನಿಗೆ ವಿಡಿಯೋ ಕಾಲ್ ಬರುತ್ತೆ, ವಿಡಿಯೋ ಕಾಲ್ ಸ್ವೀಕರಿಸಿದಾಗ ನೀಲಿಚಿತ್ರ ಕಾಣುತ್ತೆ ನಂತರ ಐದು ಸೆಕೆಂಡಿನಲ್ಲಿ ಕಾಲ್ ಕಟ್ ಆಗಿ ಮತ್ತೆ ಅದೇ ನಂಬರಿನಿಂದ ಎಡಿಟ್ ಮಾಡಲಾದ ಅಶ್ಲೀಲ ವಿಡಿಯೋ ಒಂದು ಕಳುಹಿಸಿ ನೀವು ನನಗೆ 60,000 ರೂ. ಕಳುಹಿಸಬೇಕು, ಇಲ್ಲದಿದ್ದರೆ ನಿಮ್ಮ ಈ ವಿಡಿಯೋವನ್ನು ಫೇಸ್ಬುಕ್ ಹಾಗೂ ಯೂಟ್ಯೂಬ್ ಗಳಲ್ಲಿ ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ಇಂತಹ ಅನುಭವ ನನ್ನ ಸ್ನೇಹಿತನಿಗೆ ಮಾತ್ರವಲ್ಲ ಹಲವಾರು ಜನರಿಗೆ ಆಗಿದೆ. ಇದರಲ್ಲಿ ಸುಮಾರು ಜನರು ಲಕ್ಷಾಂತರ ರೂಪಾಯಿಯನ್ನು ಕೂಡ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಬೆಳಗಾವಿ ಮಾಜಿ ಶಾಸಕ ಎನ್.ಎಚ್ ಕೊನರೆಡ್ಡಿ ಮಗನಿಗೂ ಇದೇ ರೀತಿಯಾಗಿ 15,000 ರೂ. ಕಳೆದುಕೊಂಡಿದ್ದರು.
ಇಂತಹ ಕರೆಗಳು ಬಂದರೆ ಏನು ಮಾಡಬೇಕು:-
ಇಂತಹ ಕರೆ ಹಾಗೂ ಮೆಸೇಜುಗಳು ನಿಮಗೆ ಬಂದರೆ ನೀವು ಭಯಪಡಬೇಕಾದ ಅವಶ್ಯಕತೆ ಇಲ್ಲ ಇದರಿಂದ ಪಾರಾಗಲು ನಿಮಗೆ ಮೂರು ದಾರಿ ಇದೆ.
1. ಅಪರಿಚಿತರ ಕರೆಗಳನ್ನು ಸ್ವೀಕರಿಸದಿರುವುದೇ ಉತ್ತಮ.
2. ಒಂದು ವೇಳೆ ಹೊಸ ನಂಬರ್ ಗಳಿಂದ ವಿಡಿಯೋ ಕಾಲ್ ಸ್ವೀಕರಿಸುವ ಅನಿವಾರ್ಯತೆ ಇದ್ದರೆ ಕಾಲ್ ಸ್ವೀಕರಿಸುವ ಮಾಡುವ ಮೊದಲು ನಿಮ್ಮ ಕೈಗಳನ್ನು ಕ್ಯಾಮರಾ ಮುಂದೆ ಇಟ್ಟು ನಿಮ್ಮ ಪರಿಚಯಸ್ಥರೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
3. ತಪ್ಪಾಗಿ ಕರೆಗಳನ್ನು ಸ್ವೀಕರಿಸಿದ ನಂತರ ಅವರು ನಿಮ್ಮ ವೀಡಿಯೋವನ್ನು ಅಶ್ಲೀಲ ಚಿತ್ರವನ್ನಾಗಿ ಎಡಿಟ್ ಮಾಡಿ ನಿಮ್ಮಲ್ಲಿ ಹಣದ ಬೇಡಿಕೆ ಇಟ್ಟರೆ ಯಾವುದೇ ಕಾರಣಕ್ಕೂ ಅವರಿಗೆ ಹಣವನ್ನು ಕೊಡಬೇಡಿ ಸೈಬರ್ ಕ್ರೈಮ್ 112 ಗೆ ಕರೆಮಾಡಿ ಪ್ರಕರಣ ದಾಖಲಿಸಬಹುದು.
✍? ಅಬ್ದುಲ್ ರಝಾಕ್ ಮರ್ಧಾಳ