(ನ್ಯೂಸ್ ಕಡಬ) newskadaba.com ಮುದ್ದೇಬಿಹಾಳ, ಅ.29. ನಿಧಿ ಆಸೆಗಾಗಿ ಸುಮಾರು ಎರಡು ನೂರು ವರ್ಷದ ಬನ್ನಿ ಮರವೊಂದು ಜೆಸಿಬಿ ಯಂತ್ರಕ್ಕೆ ಬಲಿಯಾಗಿರುವ ಘಟನೆ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ನಡೆದಿದೆ.
ಬುಧವಾರ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬುಡ ಸಮೇತ ಕಿತ್ತೆಸೆಯಲಾದ ಬನ್ನಿ ಮರ ನಾಲತವಾಡದ ಈರಪ್ಪ ಬಿಳೆಬಾವಿ ಎಂಬುವರ ಜಮೀನಿನಲ್ಲಿತ್ತು.
ನಾಲತವಾಡದ ಬೀದಿ ಬಸವಣ್ಣ ದೇವಸ್ಥಾನದ ವ್ಯಾಪ್ತಿ ಪ್ರದೇಶದಲ್ಲಿ ಈ ಘಟನೆ ನೆಡೆದಿದ್ದು, ಕಳೆದ ಒಂದು ವರ್ಷದ ಹಿಂದೆಯೂ ದೇವಸ್ಥಾನದ ಒಳಾಂಗಣದಲ್ಲಿ ನಿಧಿಯ ಆಸೆಗೆ ಭಾರಿ ಪ್ರಮಾಣದ ತಗ್ಗನ್ನು ಅಗೆದು ದುಷ್ಕರ್ಮಿಗಳು ಪರಾರಿಯಾಗಿದ್ದರು.
ಸದ್ಯ ನಿಧಿಗೆ ಅಗೆದಿರುವ ಬನ್ನಿ ಮರವು ಜಮೀನು ಮಾಲೀಕರ ಆರಾಧನಾ ಸ್ಥಳವಾಗಿತ್ತು ಎನ್ನಲಾಗಿದೆ. ಇದು ಜಮೀನು ಮಾಲೀಕರಲ್ಲಿ ಆತಂಕ ಮೂಡಿಸಿದೆ. ಮೇಲಿಂದ ಮೇಲೆ ಇದೇ ಪ್ರದೇಶದಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿದೆ. ಇಂತಹ ಘಟನೆಗಳ ಹಿಂದಿರುವ ಸಂಶಯಾಸ್ಪದ ತಂಡದ ಮೇಲೆ ಪೊಲೀಸರು ನಿಗಾವಹಿಸಬೇಕು. ತಮಗೆ ನೆಮ್ಮದಿಯಿಂದ ಕೃಷಿ ಚಟುವಟಿಕೆಗಳನ್ನು ಮಾಡಲು ಅವಕಾಶ ನೀಡಬೇಕು ಎಂದು ರೈತರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.