ಹುದ್ದೆ ಖಾಯಂಗೊಳಿಸುವಂತೆ ಪುನರ್ವಸತಿ ಕಾರ್ಯಕರ್ತರಿಂದ ಆಗ್ರಹ ► ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.29. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಮಿತಿಯ 24,26ನೇ ವರದಿಯ ಶಿಫಾರಸ್ಸನ್ನು ಯಥಾವತ್ತಾಗಿ ಜಾರಿಗೊಳಿಸಿ ವಿಕಲಚೇತನರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಆರ್ಡಬ್ಲ್ಯೂ ಮತ್ತು ವಿಆರ್ಡಬ್ಲ್ಯೂ ಪುನರ್ವಸತಿ ಕಾರ್ಯಕರ್ತರ ಗೌರವಧನ ಹೆಚ್ಚಳ ಮಾಡಿ ಹುದ್ದೆಯನ್ನು ಖಾಯಂಗೊಳಿಸುವಂತೆ ಕರ್ನಾಟಕ ರಾಜ್ಯ ವಿಕಲಚೇತನ ವಿವಿದ್ದೋದ್ದೇಶ(ಎಂಆರ್ಡಬ್ಲ್ಯೂ) ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ(ವಿಆರ್ಡಬ್ಲ್ಯೂ)ಜಿಲ್ಲಾ ಒಕ್ಕೂಟದ, ಪುತ್ತೂರು ಶಾಖೆ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈಗೆ ಮನವಿ ಸಲ್ಲಿಸಿದ್ದಾರೆ.

ಎಂಆರ್ಡಬ್ಲ್ಯೂ ಮತ್ತು ವಿಆರ್ಡಬ್ಲ್ಯೂ ಪುನರ್ವಸತಿ ಕಾರ್ಯಕರ್ತರ ಗೌರವಧನ ಹೆಚ್ಚಿಸಲು 29-9-2014ರಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ಈ ಪ್ರಸ್ತಾವನೆಯನ್ನು ಕಡೆಗಣಿಸಲಾಗಿದೆ. ವಿಕಲಚೇತನರಿಗೆ ಸಿಗುವ ಪ್ರತಿಯೊಂದು ಮೂಲಭೂತ ಸೌಲಭ್ಯ ಯೋಜನೆಗಳನ್ನು ಹಳ್ಳಿಗಳ ಗುಡ್ಡಗಾಡಿನ ಪ್ರದೇಶವಾದರೂ ಅವರವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಕಳೆದ 9 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದೇವೆ. ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ಗೌರವಧನದಿಂದ ಜೀವನ ನಿರ್ವಹಣೆ ಮಾಡಲು ಕಷ್ಟವಾಗಿದೆ. ಸರಕಾರ ವಿಕಲಚೇತನರಿಗೆಂದೇ ಮಾಡಿದ ಮಹತ್ವದ ಕಾಯ್ದೆ 1995ರಲ್ಲಿ ಜಾರಿಗೆ ಬಂದಿದ್ದರೂ ವಿಕಲಚೇತನರಿಗೆ ಯಾವುದೇ ಪ್ರಯೋಜನವಾಗಿಲ್ಲ. ವಿಕಲಚೇತನರ ಅಧಿನಿಯಮ ಕಾಯ್ದೆ 1995 ಮತ್ತು 2016ರ ಕಾಯ್ದೆಯಲ್ಲಿ ಅಡೆತಡೆ ರಹಿತ ವಾತಾವರಣ ಕಲ್ಪಿಸಬೇಕೆಂದು ಉಲ್ಲೇಖವಾಗಿದೆ. ಆದ್ದರಿಂದ ಈ ಕಾಯ್ದೆ ಪ್ರಕಾರ ನಮಗೆ ಸಮಾನ ಅವಕಾಶ ಕಲ್ಪಿಸಬೇಕಾದರೆ ಕನಿಷ್ಠ ವೇತನ ಜಾರಿಗೊಳಿಸಿ’ಪದನಾಮ’ಬದಲಾವಣೆ ಮಾಡಿ ಖಾಯಂ ನೌಕರರನ್ನಾಗಿ ನೇಮಕಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ದ.ಕ.ಜಿಲ್ಲಾ ಒಕ್ಕೂಟದ ಜಾನ್ ಬ್ಯಾಸ್ಟಿಸ್ ಡಿ.ಸೋಜ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ನಾಯಕ್, ಗೌರವಾಧ್ಯಕ್ಷ ನವೀನ್ ಕುಮಾರ್, ಉಪಾಧ್ಯಕ್ಷ ಮುತ್ತಪ್ಪ ಪೆರಾಬೆ, ವಿಆರ್ಡಬ್ಲ್ಯು ಕಾರ್ಯಕರ್ತರಾದ ಸೇಸಪ್ಪ ಶಾಂತಿನಗರ, ವಿಷ್ಣುಪ್ರಸಾದ್ ಶರ್ಮ ಉಪ್ಪಿನಂಗಡಿ, ಸುರೇಶ್ ಕೇಪು, ರವೀಂದ್ರ ಆಚಾರ್ಯ ಕುಡಿಪ್ಪಾಡಿ, ಮೋನಪ್ಪ ಬರೆಪುದೇಲು ಆಲಂಕಾರು ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top