(ನ್ಯೂಸ್ ಕಡಬ) Newskadaba.com ವಿಟ್ಲ, ಜೂ. 22. ಇಲ್ಲಿನ ವೀರಕಂಬ ಗ್ರಾಮದ ಕೆಲಿಂಜ ಸಮೀಪದ ಕಲ್ಮಲೆ ಎಂಬಲ್ಲಿನ ವಾಸಿಸುತ್ತಿರುವ ಕೃಷಿಕರು ಇದೀಗ ಕಾಡುಕೋಣಗಳ ಹಾವಳಿಯಿಂದಾಗಿ ತತ್ತರಿಸಿ ಹೋಗಿದ್ದಾರೆ. ಇಲ್ಲಿನ ಕಲ್ಮಲೆ ವಿಠಲ ರೈ ಎಂಬವರ ಅಡಿಕೆ ತೋಟಕ್ಕೆ ಕಳೆದ ಐದಾರು ದಿನಗಳಿಂದ ನುಗ್ಗಿದ ಎರಡು ಕಾಡುಕೋಣಗಳು 300ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಮತ್ತು ತೆಂಗಿನ ಗಿಡಗಳನ್ನು ಹಾನಿಗೈದಿದೆ.
ಕಳೆದ ವರ್ಷ ಇದೇ ರೀತಿ ದಾಳಿ ನಡೆಸಿದ ಕಾಡುಕೋಣಗಳು 200ಕ್ಕೂ ಹೆಚ್ಚು ಆಡಿಕೆ ಹಾಗೂ ತೆಂಗಿನ ಮರಗಳನ್ನು ನಾಶಪಡಿಸಿದ್ದವು ಎಂದು ತೋಟದ ಮಾಲಿಕರು ಬೇಸರ ತೋಡಿಕೊಂಡಿದ್ದಾರೆ. ಇದೀಗ ಮತ್ತೆ ಕಾಡುಕೋಣಗಳ ಕಾಟ ಮಿತಿಮೀರಿದ್ದು ಒಂದೆಡೆ ಕೊರೋನಾ ಸಂಕಷ್ಟವಾದರೆ ಮತ್ತೊಂದೆಡೆ ಕಾಡುಕೋಣಗಳ ಹಾವಳಿಯಿಂದ ಕೃಷಿಕರು ಹೈರಾಣಾಗಿದ್ದು, ಇದಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ.