(ನ್ಯೂಸ್ ಕಡಬ) Newskadaba.com ಬಂಟ್ವಾಳ, ಜೂ. 21. ರಸ್ತೆ ಬದಿಯಲ್ಲಿರುವ ತಡೆಗೋಡೆಯ ಕಾಮಗಾರಿ ನಡೆಯುತ್ತಿದ್ದ ವೇಳೆ ಗುಡ್ಡ ಕುಸಿದ ಪರಿಣಾಮ ಯುವಕನೋರ್ವ ಮಣ್ಣಿನಡಿ ಸಿಲುಕಿ, ನಂತರ ಸ್ಥಳೀಯರ ಹರಸಾಹಸದಿಂದ ಬದುಕುಳಿದ ಘಟನೆ ನಗರದ ಕುಪ್ಪೆಪದವು ಬಳಿಯ ನೊನಾಲು ಎಂಬಲ್ಲಿ ನಡೆದಿದೆ.
ಮಣ್ಣಿನಡಿಯಲ್ಲಿ ಸಿಲುಕಿದ ಯುವಕನನನ್ನು ಬಂಟ್ವಾಳ ತಾಲೂಕಿನ ಅರಳ ಗ್ರಾಮದ ರಾಜೇಶ್ ಪೂಜಾರಿ (28) ಎಂದು ಗುರುತಿಸಲಾಗಿದೆ. ನೊನಾಲು ಎಂಬಲ್ಲಿ ರಸ್ತೆಬದಿಯ ಗುಡ್ಡ ಕುಸಿಯದಂತೆ ತಡೆಗೋಡೆಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭ ರಾಜೇಶ್ ಪೂಜಾರಿ ಹಾಗೂ ಮತ್ತೋರ್ವರು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಮಣ್ಣು ಕುಸಿದು ಇವರ ಮೇಲೆಯೇ ಬಿದ್ದಿದ್ದು, ರಾಜೇಶ್ ಅವರ ತಲೆ ಮಾತ್ರವೇ ಕಾಣಿಸುತ್ತಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಎರಡು ಗಂಟೆಗಳ ಸತತ ಕಾರ್ಯಾಚರಣೆ ನಡೆಸಿ ರಾಜೇಶ್ ಅವರನ್ನು ಮೇಲಕ್ಕೆತ್ತಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.