ಸಾರ್ವಜನಿಕ ಮೈದಾನದ ದಾರಿ ಬಂದ್ ಮಾಡಿದ ನೆಕ್ಕಿಲಾಡಿ ಗ್ರಾ.ಪಂ. ➤ ಧರ್ಮಾಧಾರಿತ ರಾಜಕಾರಣದ ಮೂಲಕ ಸಾಮರಸ್ಯ ಒಡೆಯುವ ಯತ್ನ: ಜತೀಂದ್ರ ಶೆಟ್ಟಿ ಆರೋಪ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ.08. ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಮೈಂದಡ್ಕದಲ್ಲಿ ಸಾರ್ವಜನಿಕ ಮೈದಾನವೊಂದಿದ್ದು, ಆ ಮೈದಾನ 34 ನೆಕ್ಕಿಲಾಡಿಯ ಗ್ರಾ.ಪಂ.ನ ಸ್ವಾಧೀನದಲ್ಲಿ ಇರದಿದ್ದರೂ, ಆ ಮೈದಾನದೊಳಗೆ ಯಾರೂ ಪ್ರವೇಶಿಸದಂತೆ ಅಗಲು (ಅಗರು) ತೆಗೆದು ಧರ್ಮಾಧಾರಿತ ರಾಜಕಾರಣದ ಮೂಲಕ ಸಮಾಜದ ಸಾಮರಸ್ಯವನ್ನು ಒಡೆಯುವ ಹುನ್ನಾರ ಗ್ರಾ.ಪಂ. ನಡೆಸಿದೆ. ಇದು ಪರಿಸರದಲ್ಲಿ ಸಂಘರ್ಷದ ವಾತಾವರಣ ಮೂಡಿಸುವ ಕಾರ್ಯವಾಗಿದ್ದು, ಗ್ರಾ.ಪಂ.ನ ಕಾನೂನು ಬಾಹಿರ ನಡೆಯಾಗಿದೆ. ಸಮಾಜದ ಒಂದು ಧರ್ಮದ ಜನರಿಗೆ ಉಪಯೋಗವಾಗದಿರಲೆಂದು ಸಾರ್ವಜನಿಕ ಮೈದಾನದ ದಾರಿಯನ್ನೇ ಬಂದ್ ಮಾಡಿರುವುದು ಗ್ರಾ.ಪಂ.ನ ಧರ್ಮಾಧಾರಿತ ನಿರ್ಧಾರವಾಗಿದೆ. ಇದನ್ನು ಸರ್ವ ಧರ್ಮದ ಸಮನ್ವಯ ಬಯಸುವ ನಾಗರಿಕರು ಒಪ್ಪಲು ಸಾಧ್ಯವಿಲ್ಲ ಎಂದು `ಮೈಂದಡ್ಕದ ಶಾಂತಿ- ಸೌಹಾರ್ದತೆ ಉಳಿಸಿ’ ಹೋರಾಟ ಸಮಿತಿಯ ಅಧ್ಯಕ್ಷ ಜತೀಂದ್ರ ಶೆಟ್ಟಿ ಅಲಿಮಾರ್ ತಿಳಿಸಿದ್ದಾರೆ.

ಅವರು ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮೈಂದಡ್ಕದಲ್ಲಿ ಮೈದಾನಕ್ಕೆ ಪ್ರಸಕ್ತವಾದ ಸ್ಥಳ ಖಾಸಗಿ ವ್ಯಕ್ತಿಯೋರ್ವರ ಖದೀಮ ವರ್ಗದ ಕುಮ್ಕಿಯಾಗಿದ್ದು, ಇದು ಅವರ ಸ್ವಾಧೀನದಲ್ಲಿತ್ತು. ಆದರೆ ಸಮಾಜದ ಸರ್ವಧರ್ಮೀಯರಿಗೆ ಉಪಯೋಗಕ್ಕೆ ಬೇಕೆಂಬ ಹಾಗೂ ಸಮಾಜದ ಸಾಮರಸ್ಯ, ಸಹಬಾಳ್ವೆ ಇನ್ನಷ್ಟು ಗಟ್ಟಿಗೊಳ್ಳಬೇಕೆಂಬ ಸದುದ್ದೇಶದಿಂದ ನಾನು ನ್ಯಾಯಾಲಯದಲ್ಲಿ ದಾವೆ ಹೂಡಿ ಈ ಜಾಗವನ್ನು ಸಾರ್ವಜನಿಕ ಮೈದಾನಕ್ಕಾಗಿ ನೀಡಬೇಕೆಂದು ಹೋರಾಟ ನಡೆಸಿದೆ. ಹಲವು ವರ್ಷದ ಹೋರಾಟದ ಬಳಿಕ 2015ರಲ್ಲಿ ನ್ಯಾಯಾಲಯದಲ್ಲಿ ನಾನು ಮತ್ತು ಆ ಖಾಸಗಿ ವ್ಯಕ್ತಿ ರಾಜಿಯ ಮೂಲಕ ಈ ಪ್ರಕರಣವನ್ನು ಬಗೆಹರಿಸಿದ್ದು, ನ್ಯಾಯಾಲಯವೇ ಮೈಂದಡ್ಕದಲ್ಲಿರುವ ಆ ಭೂಮಿಯನ್ನು ವಿಭಾಗಿಸಿ ಸರ್ವೆ ನಂಬರ್ 88/1 ರಲ್ಲಿ ಮೈದಾನಕ್ಕೆ ಪ್ರಸಕ್ತವಾದ 55 ಸೆಂಟ್ಸ್ ಸ್ಥಳವನ್ನು ಸಾರ್ವಜನಿಕ ಮೈದಾನಕ್ಕೆಂದು ನೀಡಿದೆ. ಉಳಿದ ಜಾಗವನ್ನು ಅವರ ಕುಮ್ಕಿಯೆಂದು ಆದೇಶ ನೀಡಿದೆ. ಈ ಮೈದಾನವು ಈಗ ಕಂದಾಯ ಇಲಾಖೆಯ ವಶದಲ್ಲಿದ್ದು, ಆ ಬಳಿಕ ಈ ಮೈದಾನದ ಉಪಯೋಗವನ್ನು ಹಲವರು ಪಡೆಯುತ್ತಿದ್ದಾರೆ. ಅದರ ಪಕ್ಕದಲ್ಲೇ ಕ್ರೈಸ್ತ ಸಮುದಾಯದವರ ದಫನ ಭೂಮಿ ಹಾಗೂ ಪ್ರಾರ್ಥನಾ ಮಂದಿರವಿದ್ದು, ಯಾರಾದರೂ ಮರಣ ಹೊಂದಿದ ಸಂದರ್ಭ ಹಾಗೂ ಅಲ್ಲಿ ನಡೆಯುವ ತಿಂಗಳ ಹಾಗೂ ವಾರ್ಷಿಕ ಮರಣ ಪೂಜೆಗೆ ಬರುವ ಕ್ರೈಸ್ತ ಧರ್ಮೀಯರ ವಾಹನಗಳ ಪಾರ್ಕಿಂಗ್‌ಗೂ ಇದು ಉಪಯೋಗವಾಗುತ್ತಿತ್ತು. ಇದರೊಂದಿಗೆ ಹಲವು ಸಾರ್ವಜನಿಕ ಕಾರ್ಯಕ್ರಮಗಳಿಗೂ ಇದರ ಉಪಯೋಗ ಬೀಳುತ್ತಿತ್ತು. ಆದರೆ 34 ನೆಕ್ಕಿಲಾಡಿ ಗ್ರಾ.ಪಂ.ನ ಈಗಿನ ಆಡಳಿತ ಮಂಡಳಿ ಮಾತ್ರ ಈ ಸಾರ್ವಜನಿಕ ಮೈದಾನದ ಸುತ್ತಲೂ ಅಗಲು (ಅಗರು) ತೋಡಿ ಮೈದಾನದ ಸುತ್ತಲೂ ಚರಂಡಿ ನಿರ್ಮಾಣವಾಗುವಂತೆ ನೋಡಿಕೊಂಡು ಮೈದಾನಕ್ಕೆ ಯಾರೂ ಪ್ರವೇಶಿಸದಂತೆ ಮಾಡಿದೆ. ಮೈದಾನ ಪ್ರವೇಶಕ್ಕೆ ಇದ್ದ ವಿಶಾಲವಾದ ದಾರಿಯನ್ನು ಬಂದ್ ಮಾಡಿ ಸುಮಾರು ನಾಲ್ಕು ಇಂಚು ಅಗಲವಿರುವ ಸಿಮೆಂಟ್ ತುಂಡೊಂದನ್ನು ಇಲ್ಲಿ ನಿರ್ಮಾಣವಾದ ಚರಂಡಿಗೆ ಕಾಲು ಸಂಕದಂತೆ ಇಟ್ಟಿದೆ. ಸರ್ವಧರ್ಮೀಯರ ಉಪಯೋಗಕ್ಕೆ ಬರುತ್ತಿದ್ದ ಈ ಮೈದಾನದೊಳಗೆ ಪ್ರವೇಶಿಸದಂತೆ ಗ್ರಾ.ಪಂ. ನಿರ್ಬಂಧ ವಿಧಿಸಿರುವ ಮೂಲ ಉದ್ದೇಶವಾದರೂ ಏನು? ಇದು ಧರ್ಮಾಧಾರಿತ ರಾಜಕಾರಣದ ಮೂಲಕ ಸಮಾಜದ ಸಾಮರಸ್ಯವನ್ನು ಒಡೆಯುವ ಯತ್ನವೇ ಹೊರತು ಬೇರೇನಲ್ಲ. ಕ್ರೈಸ್ತ ಧರ್ಮದವರು ಈ ಮೈದಾನವನ್ನು ತಮ್ಮ ಅಗತ್ಯಕ್ಕೆ ಇದನ್ನು ಉಪಯೋಗಿಸಬಾರದು ಎಂಬ ಅಜೆಂಡಾ ಇದರ ಹಿಂದಿದೆ ಎಂದು ಅವರು ಆರೋಪಿಸಿದರು.

Also Read  ಕೆಲಸವಿಲ್ಲವೆಂಬ ಚಿಂತೆಯೇ..? ನಿಮಗಾಗಿ ಕಾಯುತ್ತಿದೆ 30ಕ್ಕೂ ಹೆಚ್ಚಿನ ಉದ್ಯೋಗಗಳು ➤‌ ಈಗಲೇ ಲಿಂಕ್ ನಲ್ಲಿರುವ ಸಂಖ್ಯೆಗಳಿಗೆ ಕರೆಮಾಡಿ

ಈ ಮೈದಾನ ಸಾರ್ವಜನಿಕರಿಗೆ ದೊರೆತ ಬಳಿಕ ಇಲ್ಲಿ ಆಡಲು ಬಂದ ಮುಸ್ಲಿಂ ಯುವಕನನ್ನು ಇಲ್ಲಿ ಆಟವಾಡದಂತೆ ಮೈದಾನದಿಂದ ಹೊರಗೆ ಕಳುಹಿಸಿರುವುದು, ಇಲ್ಲಿ ಸೈಕಲ್ ಸವಾರಿ ಮಾಡುತ್ತಿದ್ದ ಕ್ರಿಶ್ಚಿಯನ್ ಸಮುದಾಯದ ಇಬ್ಬರು ಪುಟಾಣಿ ಮಕ್ಕಳನ್ನು ಅಲ್ಲಿಂದ ಓಡಿಸುವ, ದಾರಿಗಡ್ಡವಾಗಿ ಗಿಡಗಳನ್ನು ನೆಟ್ಟು ದಾರಿ ಬಂದ್ ಮಾಡುವ ಷಡ್ಯಂತ್ರ ನಡೆದಿದೆಯೇ ಹೊರತು ಈವರೆಗೆ ಎಲ್ಲಿಯೂ ಖಾಸಗಿ ವ್ಯಕ್ತಿಗಳು ಈ ಮೈದಾನವನ್ನು ಅತಿಕ್ರಮಿಸಲು ಮುಂದಾಗಿಲ್ಲ. ಯುವಕರ ಮನಸ್ಸಿನಲ್ಲಿ ಮತಾಂಧತೆಯನ್ನು ತುಂಬಿಸಿ, ಅವರನ್ನು ಇಂತಹ ಕಾರ್ಯಕ್ಕೆ ಬಳಸಿಕೊಂಡು ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಕೆಲಸಗಳಿಗೆ ಇಲ್ಲಿನ ಇಬ್ಬರು ವ್ಯಕ್ತಿಗಳು ಪ್ರಮುಖ ಕಾರಣರೇ ಹೊರತು. ಇತರರಲ್ಲ. ಹಾಗಿದ್ದಾಗ ಮೈದಾನದ ದಾರಿ ಬಂದ್ ಮಾಡುವ ಮೂಲಕ ಇಡೀ ಸಮಾಜವನ್ನು ಇದರೊಳಗೆ ಪ್ರವೇಶಿಸದಂತೆ ಗ್ರಾ.ಪಂ. ತಡೆದಿರುವುದು ಯಾಕೆ? ಎಂದು ಪ್ರಶ್ನಿಸಿದ ಜತೀಂದ್ರ ಶೆಟ್ಟಿಯವರು, ಗೋಮಾಳವೆಲ್ಲಾ ಅತಿಕ್ರಮಣವಾಗಿರುವ ಇಂದಿನ ಸಂದರ್ಭದಲ್ಲಿ ದನ-ಕರುಗಳು ಇದರೊಳಗೆ ಬಂದು ಮೇಯುತ್ತಿದ್ದವು. ಆದರೆ ಈಗ ಅವುಗಳಿಗೂ ಪ್ರವೇಶವಿಲ್ಲದಂತಾಗಿದೆ. ಆಟದ ಮೈದಾನವಿರುವುದು ಬಾಲವೃದ್ಧರಾದಿಯಾಗಿ ಎಲ್ಲರ ದೈಹಿಕ ಹಾಗೂ ಮಾನಸಿಕ ಕ್ಷಮತೆ ಹೆಚ್ಚಳಕ್ಕೆ. ಆರೋಗ್ಯ ವೃದ್ಧಿಗೆ, ಸಹಬಾಳ್ವೆ, ಸಾಮರಸ್ಯ, ಸಹಜೀವನವೆನ್ನುವುದು ಮೊಳಕೆಯೊಡೆಯುವುದೇ ಮೈದಾನದಲ್ಲಿ ಒಟ್ಟಿಗೆ ಬೆರೆಯುವುದರಿಂದ. ಈ ಪರಿಸರದಲ್ಲಿರುವುದು ರೈತಾಪಿ ವರ್ಗದ ಜನ. ಅವರ ಮಕ್ಕಳು ಕ್ರೀಡೆಯಲ್ಲಿ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ, ಸಾಧನೆ ಮಾಡಬೇಕು. ಎಲ್ಲರಿಗೂ ಉಪಯೋಗವಿದ್ದ ಈ ಮೈದಾನದ ಉಪಯೋಗವನ್ನು ಪಡೆಯದಂತೆ ಗ್ರಾ.ಪಂ. ಈಗ ತಡೆದಿದ್ದು, ಈ ಊರಿನ ಮಕ್ಕಳು ಸೈಕಲ್ ಸವಾರಿ ಕಲಿಯಲು ಎಲ್ಲಿ ರಸ್ತೆಗೆ ಬರಬೇಕೆ? ಮೈದಾನಕ್ಕೆ ವೃದ್ಧರು, ಮಕ್ಕಳು ಇನ್ನು ಬರುವುದಾದರೆ ಆ ಕಿರಿದಾದ ಪಾಪುವಿನ ಮೂಲಕ ಬಂದು ಹೊಂಡಕ್ಕೆ ಬಿದ್ದು ಸೊಂಟ ಮುರಿದುಕೊಳ್ಳಬೇಕೇ? ಆ ಮೈದಾನದೊಳಗೆ ಗ್ರಾ.ಪಂ. ನೀರಿನ ಟ್ಯಾಂಕ್‌ವೊಂದನ್ನು ಇಟ್ಟಿದೆ. ಸಾರ್ವಜನಿಕರಿಗೆ ಕುಡಿಯುವ ನೀರು ನೀಡಬೇಕೆನ್ನುವು ಉದ್ದೇಶ ಪಂಚಾಯತ್‌ನದ್ದಾದರೆ, ಬಾಯಾರಿ ಬಂದ ವಿಕಲಾಂಗರು, ಮಕ್ಕಳು, ವೃದ್ಧರು ಅಲ್ಲಿಗೆ ಹೋಗುವುದಾದರೂ ಹೇಗೆ? ಎಂದರು.
ಈ ಮೈದಾನವಿನ್ನು ಗ್ರಾ.ಪಂ.ಗೆ ಹಸ್ತಾಂತರವಾಗಿಲ್ಲ. ಇದು ಕಂದಾಯ ಇಲಾಖೆಯ ವಶದಲ್ಲಿದೆ. ಈ ಮೈದಾನದಲ್ಲಿ ಗ್ರಾ.ಪಂ.ನ ಅಥಾರಿಟಿ ಏನು? ಗ್ರಾ.ಪಂ.ಗೆ ತನ್ನ ಧರ್ಮಾಧಾರಿತ ರಾಜಕೀಯ ನಿಲುವಿಗೆ ತಕ್ಕಂತೆ ಕಂದಾಯ ಇಲಾಖೆಯ ಜಾಗದಲ್ಲಿ ಕಾಮಗಾರಿ ನಡೆಸಲು ಅಧಿಕಾರ ಕೊಟ್ಟವರು ಯಾರು? ಸಾರ್ವಜನಿಕ ಆಸ್ತಿಯ ರಕ್ಷಣೆಯ ಬಗ್ಗೆ ಗ್ರಾ.ಪಂ.ಗೆ ಕಾಳಜಿಯಿದ್ದರೆ, ತನ್ನ ಸ್ವಾಧೀನದಲ್ಲಿರುವ ಅದೆಷ್ಟೋ ಭೂಮಿಗಳು ಖಾಸಗಿಗಳು ಅತಿಕ್ರಮಿಸಿದ್ದಾರೆ. ಅದನ್ನು ಮೊದಲು ರಕ್ಷಿಸಲಿ. ಗ್ರಾ.ಪಂ. ಈಗ ಮೈದಾನದಲ್ಲಿ ಅಗಲು (ಅಗರು) ತೆಗೆಯುವ ಕಾಮಗಾರಿ ನಡೆಸಿ, ಆ ಮಣ್ಣನ್ನು ಮೈದಾನದೊಳಗೆ ಹಾಕಿದೆ. ಮಳೆ ಬಂದಾಗ ಈ ಮಣ್ಣೆಲ್ಲಾ ಮೈದಾನಕ್ಕೆ ಬಂದು ಮೈದಾನವೇ ಹಾಳಾಗಲಿದೆ. ಇದು ಸರಕಾರದ ಆಸ್ತಿ ಅಂದ ಮೇಲೆ ಅದು ಸಾರ್ವಜನಿಕರ ಸೊತ್ತು. ಅದು ಸಾರ್ವಜನಿಕರಿಗೆ ಉಪಯೋಗಕ್ಕೆ ಬರಬೇಕಾದುದ್ದು. ಆದರೆ ಅದನ್ನು ಗ್ರಾ.ಪಂ. ತನ್ನ ಧರ್ಮಧಾರಿತ ರಾಜಕಾರಣಕ್ಕೆ ದುರುಪಯೋಗಪಡಿಸಿಕೊಳ್ಳಲು ಹೊರಟಿರುವುದು ಕಾನೂನು ಬಾಹಿರ ನಡೆಯಾಗಿದೆ ಎಂದು ಅವರು ಕಿಡಿಕಾರಿದರು.

Also Read  ಸಂಪತ್‌ ಕುಮಾರ್‌‌ ಹತ್ಯೆ ಪ್ರಕರಣ ➤ ಮತ್ತೆ 3 ಆರೋಪಿಗಳ ಅರೆಸ್ಟ್‌

ಈ ಮೈದಾನವಿರುವ ಮೈಂದಡ್ಕವು ನಿರ್ಜನ ಪ್ರದೇಶ. ಈ ಮೈದಾನವನ್ನೂ ಕೆಲವು ಕಿಡಿಗೇಡಿಗಳು ಗಾಂಜಾ, ಮದ್ಯದ ಪಾರ್ಟಿಗೆ ದುರುಪಯೋಗ ಪಡಿಸಿಕೊಂಡಿದ್ದಾರೆ. ಇಂತಹ ಅನೈತಿಕ ಚಟುವಟಿಕೆಗಳಿಗೆ ಕಾರಣವಾಗಿದ್ದು ಈ ಮೈದಾನದಲ್ಲಿ ಮೊದಲಿದ್ದ ಅನಧಿಕೃತ ಅಂಗಡಿ. ಈ ಪರಿಸರದ ಶಾಂತಿಭಂಗಕ್ಕೆ ಈತ ಹಾಗೂ ಈತನ ಸಹೋದರನೇ ಕಾರಣರಾಗಿದ್ದರು. ಈ ಅಂಗಡಿಯನ್ನು ತೆರವುಗೊಳಿಸಲು ಅದೆಷ್ಟೋ ಮನವಿಗಳು ಹೋಗಿವೆ. ಕೊನೆಗೂ ಕಳೆದ ಬಾರಿ ಗ್ರಾ.ಪಂ.ಗೆ ಆಡಳಿತಾಧಿಕಾರಿ ನೇಮಕವಾದ ಬಳಿಕ ಅವರ ಮುತುವರ್ಜಿಯಿಂದ ಈ ಅಂಗಡಿ ತೆರವಾಗಿದೆ. ಆದರೆ ಈಗ ಬಂದ ಗ್ರಾ.ಪಂ. ಆಡಳಿತವು ಆಕ್ಷೇಪಣೆಯ ನಡುವೆಯೂ ಈ ಪರಿಸರದ ಶಾಂತಿಭಂಗಕ್ಕೆ ಕಾರಣರಾದವರಿಗೆ ಈ ನಿರ್ಜನ ಪ್ರದೇಶದಲ್ಲಿ ತಳ್ಳುಗಾಡಿ ವ್ಯಾಪಾರ ನಡೆಸಲು ಅವಕಾಶ ನೀಡಿದೆ. ನಾವು ಈ ಮೈದಾನದಲ್ಲಿ ಗಾಂಜಾ, ಮದ್ಯದ ಪಾರ್ಟಿಗಳು ನಡೆಯದಂತೆ ತಡೆಯಲು ಅಗಲು (ಅಗರು) ತೋಡಿದ್ದು ಎಂದು ಗ್ರಾ.ಪಂ. ಹೇಳಿದರೆ, ಅದನ್ನು ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ ಗಾಂಜಾ, ಮದ್ಯದ ಪಾರ್ಟಿಗೆ ಇದರೊಳಗೆ ಬರುವವರು ಎಲ್ಲಿಯೋ ವಾಹನವಿಟ್ಟು ಕದ್ದು ಮುಚ್ಚಿ ಬರುತ್ತಾರೆ. ಮೈದಾನದ ಮುಖ್ಯದ್ವಾರದ ಮೂಲಕ ಪ್ರವೇಶಿಸುವುದಿಲ್ಲ. ಅಂತವರಿಗೆ ಈ ಕಾಮಗಾರಿಯ ಮೂಲಕ ಗ್ರಾ.ಪಂ. ಇನ್ನಷ್ಟು ಅನುಕೂಲ ಮಾಡಿಕೊಟ್ಟಂತಾಗಿದೆ. ಇಲ್ಲಿ ತಳ್ಳುಗಾಡಿಗೆ ಅವಕಾಶ ನೀಡಿದ್ದು ಅವರಿಗೆ ಇನ್ನಷ್ಟು ಉಪಯೋಗವಾಗುವಂತಾಗಿದೆ. ಯಾಕೆಂದರೆ ತಳ್ಳುಗಾಡಿಯವ ಈ ಕಿಡಿಗೇಡಿಗಳಿಗೆ ಮಾಹಿತಿದಾರನಾಗಿ ಕೆಲಸ ಮಾಡಿದರೆ, ಇಲ್ಲಿಯ ಅನೈತಿಕ ಚಟುವಟಿಕೆಗಳನ್ನು ತಡೆಯಲು ಪೊಲೀಸರು ಮೈದಾನಕ್ಕೆ ಎಂಟ್ರಿಯಾಗುವ ಮೊದಲೇ ಇವರಿಗೆ ಅಗಲು (ಅಗರು) ಹಾರಿ ಸುತ್ತ ಇರುವ ಕಾಡಿಗೆ ಓಡಿ ತಪ್ಪಿಸಿಕೊಳ್ಳಬಹುದು. ಯಾಕೆಂದರೆ ಗ್ರಾ.ಪಂ. ಕಾಮಗಾರಿಯಿಂದಾಗಿ ಪೊಲೀಸರಿಗೂ ನೇರವಾಗಿ ಮೈದಾನವನ್ನು ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಜತೀಂದ್ರ ಶೆಟ್ಟಿ ಆರೋಪಿಸಿದರು. ಒಟ್ಟಿನಲ್ಲಿ ಸಮಾಜದ ಸರ್ವ ಧರ್ಮೀಯರ ಉಪಯೋಗಕ್ಕೆ ಬರಲೆಂದು ಹೋರಾಟದ ಮೂಲಕ ಪಡೆದ ಮೈದಾನವನ್ನು ಗ್ರಾ.ಪಂ. ಉಳಿಸಿಕೊಂಡು ಸಮಾಜದಲ್ಲಿ ಸಾಮರಸ್ಯವನ್ನು ಗಟ್ಟಿಗೊಳಿಸಬೇಕೇ ಹೊರತು ಸ್ವಾರ್ಥದ ಧರ್ಮಾಧಾರಿತವಾದ ರಾಜಕೀಯಕ್ಕೆ ಬಲಿಕೊಡಬಾರದು. ಸಮಾಜದಲ್ಲಿ ಶಾಂತಿ- ಸಾಮರಸ್ಯಕ್ಕೆ ಧಕ್ಕೆ ತಂದು ಸಂಘರ್ಷದ ವಾತಾವರಣ ನಿರ್ಮಾಣ ಮಾಡುವ ಹುನ್ನಾರ ಗ್ರಾ.ಪಂ.ನದ್ದಾದರೇ, ಈ ನಿಲುವನ್ನು ಶಾಂತಿ- ಸಾಮರಸ್ಯ ಬಯಸುವ ನಾಗರಿಕರಾದ ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ಆಸ್ತಿಯನ್ನು ಗ್ರಾ.ಪಂ.ಗೆ ನೀಡದೇ, ಇತರೆ ಇಲಾಖೆಗಳ ಅಗತ್ಯ ಉದ್ದೇಶಕ್ಕೆ ಕಂದಾಯ ಇಲಾಖೆಯು ನೀಡುವುದು ಉತ್ತಮವೆಂಬುದು ತೋರುತ್ತದೆ. ಜಿಲ್ಲಾಧಿಕಾರಿಯವರು, ಎಸಿ, ತಹಶೀಲ್ದಾರ್ ಅವರು ಈ ಬಗ್ಗೆ ಗಮನಹರಿಸಬೇಕಾಗಿದೆ. ಈಗ ಮೈದಾನದ ಸುತ್ತ ಗ್ರಾ.ಪಂ. ತೋಡಿರುವ ಕಣಿಗೆ ಮೊದಲಿದ್ದ ಪ್ರವೇಶ ದ್ವಾರದಲ್ಲಿ ಮೋರಿ ಅಳವಡಿಸಿ, ಸರಾಗವಾಗಿ ಮೈದಾನಕ್ಕೆ ಪ್ರವೇಶಿಸುವಂತೆ ಗ್ರಾ.ಪಂ. ಮಾಡಿಕೊಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ. ಪರಿಸರದ ಶಾಂತಿ- ಸಾಮರಸ್ಯದ ಬದುಕಿಗೆ ಧಕ್ಕೆ ತರುವ ಗ್ರಾ.ಪಂ.ನ ನಿರ್ಧಾರಕ್ಕೆ ನಮ್ಮದು ವಿರೋಧವಿದ್ದು, ಸಮಾಜದ ಶಾಂತಿ ಬಯಸುವ ನಾಗರಿಕರಾದ ನಾವೆಲ್ಲಾ ಈಗಾಗಲೇ `ಮೈಂದಡ್ಕದ ಶಾಂತಿ- ಸೌಹಾರ್ದತೆ ಉಳಿಸಿ’ ಎಂಬ ಹೋರಾಟ ಸಮಿತಿ ಮಾಡಿದ್ದು, ಈ ಮೂಲಕ ಕಾನೂನಾತ್ಮಕವಾಗಿ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

Also Read  ಬೆಳ್ತಂಗಡಿ: ಬೈಕಿಗೆ ಕಾರು ಢಿಕ್ಕಿ; ಚಿಕಿತ್ಸೆಗೆ ಸ್ಪಂದಿಸದೇ ಯುವಕ ಸಾವು

ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಯುನಿಕ್, ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ದ.ಕ. ಜಿಲ್ಲಾ ಸಂಚಾಲಕ ರೂಪೇಶ್ ರೈ ಉಪಸ್ಥಿತರಿದ್ದರು.

 

 

error: Content is protected !!
Scroll to Top