(ನ್ಯೂಸ್ ಕಡಬ) newskadaba.com ಮೈಸೂರು, ಜೂ.07. ಮೈಸೂರಿನ ಜನತೆ ಸಾಕಷ್ಟು ಪ್ರೀತಿ ತೋರಿಸಿ ನನ್ನನ್ನು ಮನೆ ಮಗಳಂತೆ ನೋಡಿಕೊಂಡಿದ್ದಾರೆ. ಇಲ್ಲಿ ನನಗೆ ತವರೂರಿನ ಭಾವನೆ ಮೂಡಿದೆ. ಇಂದು ತವರನ್ನು ಬಿಟ್ಟು ತೆರಳುವ ಹಾಗಾಗಿದೆ. ಥ್ಯಾಂಕ್ಯೂ ಮೈಸೂರು. ಎಂದು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೈಸೂರಿನಲ್ಲಿ ಸೋಮವಾರದಂದು ಭಾವುಕರಾದರು.
ರಾಜಕೀಯ ಕೆಸರೆರಚಾಟಕ್ಕೆ ಕಳೆದ ಕೆಲವು ಸಮಯಗಳಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರಣರಾಗಿದ್ದರು. ಎಲ್ಲಾ ಪಕ್ಷಗಳ ಮುಖಂಡರು ಜಿಲ್ಲಾಧಿಕಾರಿಯ ಖಡಕ್ ರೂಲ್ಸ್ ಗೆ ಕಸಿವಿಸಿಗೊಂಡು ರೋಹಿಣಿ ಸಿಂಧೂರಿಯವರ ವಿರುದ್ಧ ಧ್ವನಿಯೆತ್ತಿದ್ದರು. ಕೊನೆಯ ಹಂತದಲ್ಲಿ ಪಾಲಿಕೆ ಕಮಿಷನರ್ ಜೊತೆಗೂ ಬಹಿರಂಗ ವಾಗ್ವಾದ ನಡೆದಿದ್ದು, ವರ್ಗಾವಣೆಗೆ ಹಾದಿ ಸುಗಮವಾಗಿತ್ತು. ಇಂದು ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಖಡಕ್ ಆದೇಶದ ಮೂಲಕ ಒಳ್ಳೆಯ ಕೆಲಸ ಮಾಡುವಂಥ ಸಂದರ್ಭದಲ್ಲಿ ದಿಢೀರನೆ ಈ ಬೆಳವಣಿಗೆ ನಡೆದಿದೆ ಎಂದು ಭಾವುಕರಾಗಿದ್ದಾರೆ. ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಭೇಟಿಯಾಗಿ ಶುಭಾಶಯ ಕೋರಿದ್ದಾರೆ.