ರಾಜ್ಯದ ಅರೆವೈದ್ಯಕೀಯ ವಿಭಾಗಕ್ಕೆ ಸರಕಾರದ ಅಧೀನದಲ್ಲಿ ಮಂಡಳಿ ಸ್ಥಾಪಿಸುವಂತೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಳ್ಳಾರಿ ಜಿಲ್ಲಾ ಸಮಿತಿಯಿಂದ ಮನವಿ

(ನ್ಯೂಸ್ ಕಡಬ) Newskadaba.com
ಸಿರುಗುಪ್ಪ, ಜೂ. 04. ವೈದ್ಯಕೀಯ ಶಿಕ್ಷಣದ ಅವಿಭಾಜ್ಯ ಅಂಗವಾಗಿರುವ ಅರೆವೈದ್ಯಕೀಯ ಕೋರ್ಸ್ ಗೆ ಪ್ರತ್ಯೇಕವಾಗಿ ಸರಕಾರದ ಮಂಡಳಿ ಇಲ್ಲದ ಕಾರಣ ಅರೆವೈದ್ಯಕೀಯ ಪದವೀಧರರು ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ತಕ್ಷಣ ರಾಜ್ಯ ಸರಕಾರವು ವಿದ್ಯಾರ್ಥಿಗಳಿಗೆ, ಪದವೀಧರರಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸರಕಾರದ ಅಧೀನದಲ್ಲಿ ಅರೆವೈದ್ಯಕೀಯ ಮಂಡಳಿ ಸ್ಥಾಪಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸುತ್ತದೆ.

 

ರಾಜ್ಯದಲ್ಲಿ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಿಂದ ವರ್ಷಾನುವರ್ಷ ಬಹುದೊಡ್ಡ ಸಂಖ್ಯೆಯಲ್ಲಿ ಅರೆವೈದ್ಯಕೀಯ ಪದವಿಯನ್ನು ಪಡೆದು ತೇರ್ಗಡೆಯಾಗುತ್ತಾರೆ. ಆದರೆ, ಸರಕಾರದಿಂದ ಅಂಗೀಕೃತವಾದ ಅಧಿಕೃತ ಅರೆವೈದ್ಯಕೀಯ ಮಂಡಳಿ ಇಲ್ಲಿಯವರೆಗೂ ಸ್ಥಾಪನೆಯಾಗಿಲ್ಲ. ಹಲವು ಖಾಸಗಿ ನೋಂದಣಿಯಾದ ಸಂಸ್ಥೆಗಳಿದ್ದರೂ ಈಗ ಅದಕ್ಕೆ ರಾಷ್ಟ್ರ ಹಾಗೂ ಅಂತರಾಷ್ಟ್ರಮಟ್ಟದಲ್ಲಿ ಮಾನ್ಯತೆ ಇಲ್ಲದೆ ಇರುವುದರಿಂದ ಅರೆವೈದ್ಯಕೀಯ ಪದವೀಧರರು ಉದ್ಯೋಗಕ್ಕಾಗಿ ಪರದಾಡುವಂತಾಗಿದೆ. ಅಂತರ್ ರಾಜ್ಯ ಹಾಗೂ ವಿದೇಶಗಳಲ್ಲಿ ಉದ್ಯೋಗ ಮಾಡುವ ಅವಕಾಶವು ಈಡೇರುತ್ತಿಲ್ಲ.

 


ಎಂತಹ ಆರೋಗ್ಯ ತುರ್ತು ಪರಿಸ್ಥಿತಿ ಬಂದರೂ, ವಿವಿಧ ಸೋಂಕುಗಳು ಜಗತ್ತಿಗೆ ಪರಿಚಯಗೊಂಡರೂ ಜನರ ರಕ್ಷಣೆಗಾಗಿ, ಜನ ಜೀವನದ ಸುಧಾರಣೆಗಾಗಿ ಮೊದಲನೆಯ ಸಾಲಿನಲ್ಲಿ ನಿಂತು ಅರೆವೈದ್ಯರು ಕಾರ್ಯ ನಿರ್ವಹಿಸಿದ್ದಾರೆ. ಇವರನ್ನು ಯಾವ ಕಾರಣಕ್ಕೂ ಸಹ ನಿರ್ಲಕ್ಷಿಸದೇ ಇವರ ಸಂಕಷ್ಟವನ್ನರಿತು ಸರಕಾರವು, ಸರಕಾರದ ಅಧೀನದಲ್ಲಿರುವ ನೊಂದಣಿ ಸಂಸ್ಥೆ ಸ್ಥಾಪಿಸಿ ಅರೆವೈದ್ಯಕೀಯ ಸಿಬ್ಬಂದಿಗಳ ಭವಿಷ್ಯವನ್ನು ಬೆಳಗಿಸುವಲ್ಲಿ ಅತಿ ಶೀಘ್ರದಲ್ಲಿ ಕಾರ್ಯ ಪ್ರವೃತ್ತರಾಗಬೇಕೆಂದು ಈ ಮೂಲಕ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಳ್ಳಾರಿ ಜಿಲ್ಲೆಯು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ, ರಾಜ್ಯದ ಆರೋಗ್ಯ ಮಂತ್ರಿಗಳಿಗೆ ಹಾಗೂ ವೈದ್ಯಕೀಯ ಶಿಕ್ಷಣ ಮಂತ್ರಿಯವರಿಗೆ ಸಿರುಗುಪ್ಪ ತಹಶೀಲ್ದಾರರಾದ ಸತೀಶ್ ಬಿ ಕೂಡಲಗಿ ರವರ ಮುಖಾಂತರ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಜಂಟಿ ಕಾರ್ಯದರ್ಶಿ ಹಬೀಬ್, ಮುಖಂಡರಾದ ಟಿಜಿ ನಿಜಾಮ್, ಯುನೂಸ್ ಮತ್ತು ಅಹಮದ್ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group