(ನ್ಯೂಸ್ ಕಡಬ) Newskadaba.com ಮೇ. 26. ಹಿರಿಯ ಸ್ವಾತಂತ್ರ್ಯ ಸೇನಾನಿ, ಜನಪರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರು, ಆ ನಂತರವೂ ತನ್ನ ಜೀವನದ ಬಹುಭಾಗವನ್ನು ಸಮಸ್ತ ಕನ್ನಡಿಗರ ಹಿತಕ್ಕಾಗಿ ಮುಡಿಪಾಗಿಟ್ಟಿದ್ದರು. ಕ್ವಿಟ್ ಇಂಡಿಯಾ ಚಳವಳಿ, ಕರ್ನಾಟಕ ಏಕೀಕರಣ ಚಳವಳಿ ಮೊದಲಾದವುಗಳಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಅದೇ ರೀತಿ ಗಾಂಧಿವಾದದಿಂದ ಪ್ರೇರೇಪಿತರಾಗಿದ್ದ ಅವರು, ಬಡವರಿಗಾಗಿ ಬಾಳಿ ಬದುಕಿದರು. ದಮನಿತ ವರ್ಗಗಳ ಹಕ್ಕುಗಳ ಹೋರಾಟ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟದ ಮೂಲಕ ಅವರು ಜನಪರ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಪ್ರಗತಿಪರ ಚಿಂತಕರಾಗಿದ್ದ ಶತಾಯುಷಿ ದೊರೆಸ್ವಾಮಿಯವರು ಹೋರಾಟ ರಂಗದಲ್ಲಿ ದಣಿವರಿಯದ ಸಾರಥಿಯಾಗಿದ್ದರು. ಇಂತಹ ಮಹಾನ್ ಚೇತನದ ಅಗಲುವಿಕೆಯು ಕನ್ನಡಿಗರಿಗಾದ ಬಲುದೊಡ್ಡ ನಷ್ಟವಾಗಿದೆ. ಆರೆಸ್ಸೆಸ್-ಸಂಘಪರಿವಾರದ ಪಿತೂರಿಗಳಿಗೆ, ಅದರ ಸಂವಿಧಾನ ವಿರೋಧಿ ನಡೆಗಳಿಗೆ ದೊರೆಸ್ವಾಮಿಯವರು ಎಂದೂ ಅಡ್ಡಗಾಲಾಗಿ ನಿಂತಿದ್ದರು. ಕರ್ನಾಟಕದ ಸಾಕ್ಷಿ ಪ್ರಜ್ಞೆ ದೊರೆಸ್ವಾಮಿಯವರ ಹೋರಾಟದ ಹಾದಿಯನ್ನು ಅರಿತುಕೊಂಡು, ಅವರ ತತ್ವಾದರ್ಶವನ್ನು ಪೋಷಿಸಿಕೊಂಡು ಕನ್ನಡಿಗರು ಅವರ ಕನಸಿನ ಕರುನಾಡಿಗೆ ಜೀವ ತುಂಬಬೇಕಾಗಿದೆ. ಅದೇ ರೀತಿ ದೇಶ ಎದುರಿಸುತ್ತಿರುವ ಪ್ರಸಕ್ತ ಬಿಕ್ಕಟ್ಟುಗಳಿಗೆ ಇವರ ಚಿಂತನೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಕಾರ್ಯ ನಡೆಯಬೇಕಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಶಿಸುತ್ತದೆ.