✍? ರಶೀದ್ ಬೆಳ್ಳಾರೆ
(ನ್ಯೂಸ್ ಕಡಬ) newskadaba.com ವಿಟ್ಲ, ಮೇ.22. ಬಂಟ್ವಾಳ ತಾಲೂಕಿನ ಪೆರುವಾಯಿ ನಿವಾಸಿ ಸಂಜೀವ ಮೊಗೇರ ಹಾಗೂ ಕಮಲಾಕ್ಷಿ ದಂಪತಿಗಳ ಕಣ್ಣೀರಿನ ಕಥೆಯಿದು. ಈ ಬಡ ಕುಟುಂಬದ ಶೋಚನೀಯ ಅವಸ್ಥೆಯನ್ನು ಹೇಳತೀರದಾಗಿದೆ. ಕೂಲಿ ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದ ಇವರ ಮನೆಯು ಬೀಳುವ ಹಂತಕ್ಕೆ ಬಂದರೂ ಯಾವುದೇ ಜನಪ್ರತಿನಿಧಿಯ ಗಮನಕ್ಕೆ ತಂದರೂ, ಸರಕಾರದ ವತಿಯಿಂದ ದೊರಕುವ ಆಶ್ರಯ ಯೋಜನೆಗೂ ಅರ್ಜಿ ಹಾಕಿದರೂ ಯಾವುದೂ ಪ್ರಯೋಜನವಾಗಿಲ್ಲ. ಒಂದು ಸಣ್ಣ ಗುಡಿಸಲಿನಲ್ಲಿ ಕಾಲ ಕಳೆಯುತ್ತಿದ್ದ ಇವರಿಗೆ ಏನು ಮಾಡಬೇಕೆಂದು ದೋಚದಂತಾದ ಸ್ಥಿತಿ ಎದುರಾಗಿತ್ತು.
ಬೆಳಕನ್ನ ಹರಿಸಿದ ಪೆರುವಾಯಿಯ ಮುಸ್ಲಿಂ ಐಕ್ಯ ವೇದಿಕೆ: ಹಲವಾರು ಸಮಾಜಿಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಕಷ್ಟ ನೋವುಗಳಿಗೆ ಸ್ಪಂದಿಸುವ ಈ ಐಕ್ಯ ವೇದಿಕೆಯು ಸಂಜೀವ ಮೊಗೇರರ ಕಷ್ಟಕ್ಕೆ ಸ್ಪಂದಿಸಿ ಸಹೋದರತೆಯ ಅಭೂತಪೂರ್ವ ಕ್ಷಣಕ್ಕೆ ಪೆರುವಾಯಿಯ ನಾಡು ಸಾಕ್ಷಿ ಯಾಯಿತು. ಈ ತಂಡವು ದುಸ್ಥಿತಿಯಲ್ಲಿದ್ದ ಮನೆಗೆ ಧಾವಿಸಿ ಎಲ್ಲಾ ವಿಚಾರವನ್ನು ಕಲೆ ಹಾಕಿ ಸಂಜೀವರ ಕುಟುಂಬಕ್ಕೆ ಬೆನ್ನುಲುಬಾಗಿ ನಿಂತು ತಕ್ಷಣವೇ ಕಾರ್ಯಪ್ರವೃತರಾದರು.
ತಂಡದ ಸದಸ್ಯರೆಲ್ಲರೂ ಒಟ್ಟುಗೂಡಿ ಕೈ ಜೋಡಿಸಿ ನಾಲ್ಕು ದಿನದಲ್ಲಿ ಸುಂದರವಾದ ಮನೆಯನ್ನು ನಿರ್ಮಿಸಿ ಕತ್ತಲಿನಲ್ಲಿ ಕಳೆಯುತ್ತಿದ್ದ ಈ ಕುಟುಂಬಕ್ಕೆ ಬೆಳಕನ್ನು ಚೆಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಏನೆಲ್ಲಾ ಮೂಲಭೂತ ಸೌಕರ್ಯಗಳು ಬೇಕು ಅದನ್ನು ಮಾಡಿಕೊಟ್ಟಿತ್ತು. ಸರಿ ಸುಮಾರು ಒಂದು ಲಕ್ಷದ ಮೂವತ್ತು ಸಾವಿರ ರೂ.ನಲ್ಲಿ ಈ ಮನೆ ನಿರ್ಮಾಣವಾಗಿದೆ ಎಂದು ಅಂದಾಜಿಸಲಾಗಿದೆ. ಕೆಳ ದಿನಗಳ ಹಿಂದೆ ಭಾರೀ ಗಾಳಿ ಮಳೆಗೆ ಈ ಮನೆ ಸಂಪೂರ್ಣ ಕುಸಿದು ಬಿದ್ದು ಶೋಚನೀಯ ಪರಿಸ್ಥಿತಿ ಎದುರಾಗಿತ್ತು. ಇದು ಮೊದಲೇನಲ್ಲ. ವರುಷಗಳಿಂದ ಈ ಸಮಸ್ಯೆಗಳನ್ನು ಅನುಭವಿಸುತ್ತಾ ಬಂದಿದ್ದರೂ ಯಾರೂ ಇಲ್ಲಿಯವರೆಗೆ ಗಮಹರಿಸದೇ ಇದ್ದದ್ದು ವಿಪರ್ಯಾಸವೇ ಸರಿ. ಇದೀಗ ಪೆರುವಾಯಿಯ ಮುಸ್ಲಿಂ ಐಕ್ಯ ವೇದಿಕೆಯ ತಂಡ ಕಷ್ಟಕ್ಕೆ ಸ್ಪಂದಿಸಿ ಸುಸಜ್ಜಿತ ಮನೆ ನಿರ್ಮಿಸಿ ಎಲ್ಲರ ಗಮನ ಸೆಳೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೆಯೊಡತಿ ಕಮಲಾಕ್ಷಿ ಸಂಜೀವ ಮೊಗೇರ, ನಾವು ಕಷ್ಟವನ್ನು ಹಲವು ವರುಷಗಳಿಂದ ಅನುಭವಿಸುತ್ತಾ ಬಂದೆವು. ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದೆವು. ಮನೆಯು ಕುಸಿಯುವ ಹಂತದಲ್ಲಿತ್ತು. ಪಂಚಾಯತ್ ನವರು ಮನೆಗೆ ಬಂದಿದ್ದರಾದರೂ ಇಲ್ಲಿಯವರೆಗೆ ಯಾವುದೇ ಸಹಕಾರ ನಮಗೆ ಸಿಗಲಿಲ್ಲ. ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಮನೆಯು ಸಂಪೂರ್ಣ ಕುಸಿದು ಬಿದ್ದಿದ್ದು, ನಮ್ಮ ಕಷ್ ಕ್ಕೆ ಸ್ಪಂದಿಸಿ ಮುಸ್ಲಿಂ ಬಾಂಧವರು ಸುಂದರವಾದ ಮನೆಯನ್ನು ನಮಗೆ ನಿರ್ಮಿಸಿಕೊಟ್ಟಿದ್ದಾರೆ ಎಂದಿದ್ದಾರೆ.