(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.15. ಪಶ್ಚಿಮದ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ‘ತೌಖ್ತೆ’ ಹೆಸರಿನ ಚಂಡಮಾರುತಕ್ಕೆ ಕರಾವಳಿ ತತ್ತರಿಸಿದ್ದು, ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇದರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 4 ದಿನಗಳ ಕಾಲ ಭಾರೀ ಗಾಳಿ-ಮಳೆಯಾಗುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ನಾಳೆ (ಮೇ.16) ರೆಡ್ ಅಲೆರ್ಟ್‌ನ್ನು ಘೋಷಿಸಲಾಗಿದೆ. ಮೇ 17 ಮತ್ತು 18ರಂದು ಆರೆಂಜ್ ಅಲರ್ಟ್ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಗುಡುಗು-ಸಿಡಿಲು ಸಹಿತ ಬಿರುಸಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ. ಚಂಡಮಾರುತದಿಂದ ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಸೋಮೇಶ್ವರದಲ್ಲಿ ರುದ್ರಭೂಮಿಗೆ ಹಾನಿಯಾಗಿದೆ. ಮಂಗಳೂರಿನಲ್ಲಿ ಎರಡಂತಸ್ತಿನ ಮನೆಯೊಂದು ಕೊಚ್ಚಿಹೋಗಿದೆ.