(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮೇ.11. ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸುಬ್ರಹ್ಮಣ್ಯ ಪೊಲೀಸರು ನಾಲ್ಕು ಬಂದೂಕುಗಳು ಹಾಗೂ ಸಜೀವ ಗುಂಡೊಂದನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಸುಳ್ಯ ತಾಲೂಕಿನ ಛತ್ರಪ್ಪಾಡಿ ದಿವಾಕರ ಆಚಾರಿ (52), ಕಡಬ ತಾಲೂಕಿನ ನೂಚಿಲ ನಿವಾಸಿ ಕಾರ್ತಿಕ್ (25), ಕಡಬದ ನೆಟ್ಟಣ ಸಮೀಪದ ಚಿದ್ಗಲ್ ನಿವಾಸಿ ಅಶೋಕ್ (35), ಹಾಸನ ಜಿಲ್ಲೆಯ ಹನುಮಂತಪುರದ ಚಂದನ್ (32) ಎಂದು ಗುರುತಿಸಲಾಗಿದೆ. ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಎಂಬಲ್ಲಿ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ದಾಳಿ ನಡೆಸಿದ ಸುಬ್ರಹ್ಮಣ್ಯ ಎಸ್ಐ ಓಮನ ಹಾಗೂ ಸಿಬ್ಬಂದಿಗಳು, ಆರೋಪಿಗಳಿಂದ ಬಂದೂಕು ಹಾಗೂ ಮದ್ದುಗುಂಡು ವಶಪಡಿಸಿಕೊಂಡಿದ್ದಾರೆ. ಈ ನಾಲ್ವರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರಗಳ ನಿರ್ಮಾಣ ಮತ್ತು ದಾಸ್ತಾನು ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.