(ನ್ಯೂಸ್ ಕಡಬ) newskadaba.com ಕಡಬ, ಮೇ.09. ಕಳೆದ ಹಲವು ವರ್ಷಗಳಿಂದ ಕೆಸರುಮಯವಾಗಿದ್ದ ಮರ್ಧಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೃಹತ್ ನೀರಿನ ಟ್ಯಾಂಕನ್ನು ಸ್ಥಳೀಯ ವಾರ್ಡ್ ನ ಪಂಚಾಯತ್ ಸದಸ್ಯರು ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ.
102 ನೆಕ್ಕಿಲಾಡಿ ಗ್ರಾಮದ ಮರ್ಧಾಳ ಎಂಬಲ್ಲಿರುವ ಬೃಹತ್ ನೀರಿನ ಟ್ಯಾಂಕ್‌ನಲ್ಲಿ ಕೆಸರುಮಯ ನೀರು ಬರುತ್ತಿದೆ ಎಂಬ ಸ್ಥಳೀಯ ನಿವಾಸಿಗಳ ದೂರಿಗೆ ಸ್ಪಂದಿಸಿದ ವಾರ್ಡ್ ಸದಸ್ಯರಾದ ಶಾಕಿರ್ ಬಡಕೋಡಿ ಹಾಗೂ ಅಜಯ್ ಮೈಪಾಜೆ ಅವರು ಶನಿವಾರದಂದು ಟ್ಯಾಂಕ್‌ನಲ್ಲಿ ತುಂಬಿದ್ದ ಹೂಳನ್ನು ತೆಗೆಸಿ, ಶುಚಿಗೊಳಿಸಿದ್ದಾರೆ. ಈ ಮೂಲಕ ತಮಗೆ ಮತ ಹಾಕಿ ಗೆಲ್ಲಿಸಿದ ಮತದಾರರ ದೂರಿಗೆ ಸ್ಪಂದಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಾಕಿರ್ ಮತ್ತು ಅಜಯ್, ತಮ್ಮ ವ್ಯಾಪ್ತಿಯಲ್ಲಿ ಇನ್ನೂ ಹಲವು ನೀರಿನ ಟ್ಯಾಂಕ್ ಗಳಲ್ಲಿ ಹೂಳು ತುಂಬಿಕೊಂಡಿದ್ದು, ಕೆಲವು ಟ್ಯಾಂಕ್‌ಗಳನ್ನು ನಿರ್ಮಿಸಿದ ನಂತರ ಇದುವರೆಗೆ ಶುಚಿಗೊಳಿಸಿರುವುದಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಎಲ್ಲಾ ಟ್ಯಾಂಕ್ ಗಳ ಹೂಳನ್ನು ಎತ್ತಿ ಶುಚಿಗೊಳಿಸುವ ಮೂಲಕ ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದಿದ್ದಾರೆ.