ಥಾಲೆಸೇಮಿಯಾ – ವಂಶವಾಹಕ ಖಾಯಿಲೆಗೆ ಚಿಕಿತ್ಸೆ ಹೇಗೆ.? ✍? ಡಾ| ಮುರಲೀ ಮೋಹನ್ ಚೂಂತಾರು

ಥಾಲೆಸೇಮಿಯಾ ಎಂಬ ರೋಗ ರಕ್ತ ಸಂಬಂಧಿ ವಂಶವಾಹಕ ಖಾಯಿಲೆಯಾಗಿದ್ದು, ರೋಗಿಗಳಲ್ಲಿ ರಕ್ತದಲ್ಲಿರುವ ಆಮ್ಲಜನಕವನ್ನು ಜೀವಕೋಶಗಳಿಗೆ ತಲುಪಿಸುವ ‘ಹಿಮೋಗ್ಲೋಬಿನ್’ ಎಂಬ ಪ್ರೋಟಿನ್ ಸರಿಯಾಗಿ ಕಾರ್ಯನಿರ್ವವಹಿಸುದಿಲ್ಲ. ಈ ಹಿಮೋಗ್ಲೋಬಿನ್‍ನ ರಚನೆಯಲ್ಲಿ ಉಂಟಾಗುವ ದೋಷದಿಂದಾಗಿ ಅಸಹಜವಾದ ಹಿಮೋಗ್ಲೋಬಿನ್ ತನ್ನ ಕಾರ್ಯಕ್ಷಮತೆಯನ್ನು ಕಳೆದುಕೊಂಡು ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಈ ಕಾರಣದಿಂದಲೇ ಈ ಖಾಯಿಲೆಯಿಂದ ಬಳಲುತ್ತಿರುವವರು ರಕ್ತಹೀನತೆಯಿಂದ ಬಳಲುತ್ತಾರೆ. ತಂದೆ ತಾಯಿಯರಿಂದ ಜನ್ಮಜಾತವಾಗಿ ಬಳುವಳಿಯಾಗಿ ಬರುವ ಈ ಖಾಯಿಲೆ ಪುರುಷ ಮತ್ತು ಮಹಿಳೆಯಲ್ಲಿ ಸಮಾನವಾಗಿ ಕಂಡು ಬರುತ್ತದೆ. ಆಲ್ಫಾ ಮತ್ತು ಬೀಟಾ ಥಾಲೆಸೇಮಿಯಾ ಎಂಬ ಎರಡು ರೀತಿಯ ಬಗೆಗಳಾಗಿ ಈ ರೋಗವನ್ನು ವಿಂಗಡಿಸಲಾಗುತ್ತದೆ. ಆಲ್ಫಾ ಮತ್ತು ಬೀಟಾ ಗ್ಲೋಬಿನ್ ಚೈನ್‍ಗಳಲ್ಲಿ ಕಳೆದು ಹೋದ ವಂಶವಾಹಿನಿಗಳ ಆಧಾರದ ಮೇಲೆ ಈ ವಿಂಗಡಣೆ ಮಾಡಲಾಗಿದೆ. ಸಾಮಾನ್ಯವಾಗಿ ಗ್ರೀಕ್, ಮದ್ಯ ಯುರೋಪ್, ದಕ್ಷಿಣ ಏಷ್ಯಾ, ಆಫ್ರಿಕಾ ಖಂಡಗಳಲ್ಲಿ ಹೆಚ್ಚು ಕಾಣಸಿಗುವ ಈ ರೋಗ 2013ರಲ್ಲಿ 280 ಮಿಲಿಯನ್ ರೋಗಿಗಳನ್ನು ಭಾದಿಸಿದೆ. ಅದರಲ್ಲಿ 4,40,000 ಮಂದಿ ತೀವ್ರತರವಾದ ಥಾಲೆಸೇಮಿಯಾ ರೋಗದಿಂದ ಬಳಲಿದ್ದರು. 2013ರಲ್ಲಿ 26,000 ಮಂದಿ, 1990ರಲ್ಲಿ 36,000 ಮಂದಿಈ ರೋಗದಿಂದ ಸಾವನ್ನಪ್ಪಿದ್ದರೆ, 2015ರಲ್ಲಿ 17,000 ಮಂದಿ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದಿದೆ.


ಥಾಲಸಾ’ ಎಂಬ ಗ್ರೀಕ್ ಶಬ್ದದಿಂದ ಹುಟ್ಟಿಕೊಂಡ ಈ ರೋಗಕ್ಕೆ ‘ಸಮುದ್ರ’ ಎಂಬ ಅರ್ಥವಿದೆ ಮತ್ತು ‘ಹೀಮ’ ಎಂಬ ಗ್ರೀಕ್ ಶಬ್ದಕ್ಕೆ ಲ್ಯಾಟಿನ್‍ನಲ್ಲಿ ರಕ್ತ ಎಂಬರ್ಥವಿದೆ. ಮೆಡಿಟರೇನಿಯಮ್ ಸಮದ್ರದ ಪ್ರದೇಶದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದ ಈ ರೋಗವನ್ನು ‘ಮೆಡಿಟರೇನಿಯಮ್’ ‘ಅನೀಮಿಯಾ’ ಎಂದು ಕರೆಯಲಾಗುತ್ತಿತ್ತು. ವಂಶವಾಹಕಗಳಿಗೂ, ಈ ರೋಗದ ಆರಂಭಕ್ಕೂ ಸಂಬಂಧವಿರುವುದನ್ನು ಪತ್ತೆ ಹಚ್ಚಿದ ಬಳಿಕ ಈ ರೋಗವನ್ನು ‘ಥಾಲಸೇಮಿಯಾ’ ಎಂದು ಪುನರ್ ನಾಮಕರಣ ಮಾಡಿಲಾಯಿತು. 1932ರಲ್ಲಿ ಅಧಿಕೃತವಾಗಿ ಥಾಲೆಸೇಮಿಯಾ ಎಂಬ ಶಬ್ದದ ಬಳಕೆ ಮಾಡಲ್ಪಟ್ಟಿತ್ತು. ಅರಬ್ಬಿ ಮತ್ತು ಏಷ್ಯಾಖಂಡದ ಜನರನ್ನು ಹೆಚ್ಚು ಕಾಡುವ ಈ ರೋಗ, ಮಾಲ್ಡಿವ್ಸ್ ದೇಶದಲ್ಲಿ ಜನಸಂಖ್ಯೆಯ 18% ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ. ಥಾಯ್ಲೇಂಡ್‍ನಲ್ಲಿ 16%, ಭಾರತ, ಬಾಂಗ್ಲಾದೇಶ, ಪಾಕಿಸ್ಥಾನ ಚೈನಾ ಮಲೇಷಿಯಾ ದೇಶದಲ್ಲಿ ಜನಸಂಖ್ಯೆಯ 3ರಿಂದ 8% ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ.


ಕಾರಣಗಳು ಏನು? :-
ಥಾಲಸೇಮಿಯಾ ಎನ್ನುವುದು ವಂಶವಾಹಕ ರಕ್ತ ಸಂಬಂಧಿ ರೋಗವಾಗಿದ್ದು ಹೆತ್ತವರಿಂದ ಮಕ್ಕಳಿಗೆ ಬರುತ್ತದೆ. ನಮ್ಮ ದೇಹದ ಕೆಂಪು ರಕ್ತಕಣಗಳಲ್ಲಿ ‘ಹಿಮೋಗ್ಲೋಬಿನ್’ ಎಂಬ ಪ್ರೋಟಿನ್ ಇದ್ದು ಇದು ಜೀವಕೋಶಗಳಿಗೆ ಆಮ್ಲಜನಕದ ಪೂರೈಕೆಗೆ ಅತೀ ಅಗತ್ಯ. ಈ ಹಿಮೋಗ್ಲೋಬಿನ್‍ನಲ್ಲಿ ಎರಡು ಬಗೆಯ ಪ್ರೋಟೀನ್ ಇದ್ದು, ಇದನ್ನು ಆಲ್ಫಾ ಮತ್ತು ಬೀಟಾ ಗ್ಲೋಬಿನ್ ಪ್ರೋಟೀನ್‍ಗಳು ಎನ್ನುತ್ತಾರೆ. ವಂಶವಾಹಿನಿ ಜೀನ್‍ಗಳಲ್ಲಿ ದೋಷವಿದ್ದಲ್ಲಿ ಈ ಪ್ರೋಟಿನ್‍ಗಳ ಉತ್ಪಾದನೆಯಲ್ಲಿ ತೊಂದರೆಯಾಗಿ, ಅಸಹಜವಾದ ಹಿಮೋಗ್ಲೋಬಿನ್ ತಯಾರಿಸಲ್ಪಡುತ್ತದೆ. ಈ ಕಾರಣದಿಂದಾಗಿ ವ್ಯಕ್ತಿಯ ಕೆಂಪು ರಕ್ತಕಣಗಳು ನಾಶವಾಗಿ ರಕ್ತಹೀನತೆಗೆ ಕಾರಣವಾಗುತ್ತದೆ. ಈ ದೇಹಸ್ಥಿತಿಯನ್ನು ಥಾಲಸೇಮಿಯಾ ಎಂದು ಕರೆಯುತ್ತಾರೆ. ಆಲ್ಫಾ ಥಾಲೆಸೇಮಿಯಾ, ಆಲ್ಫಾ ಪ್ರೋಟಿನ್ ಅಸಹಜತೆಯಿಂದ ಕಂಡುಬರುತ್ತಿದೆ. ಈ ರೋಗ ದಕ್ಷಿಣ ಏಷ್ಯಾ, ಏಷ್ಯಾ, ಚೈನಾ ಮತ್ತು ಆಫ್ರಿಕಾ ಖಂಡದಲ್ಲಿ ಹೆಚ್ಚು ಕಂಡು ಬರುತ್ತದೆ. ಬೀಟಾ ಥಾಲೆಸೇಮಿಯಾವನ್ನು ಕೂಲಿ ಅನೀಮಿಯಾ ಎಂದೂ ಕರೆಯುತ್ತಾರೆ. ಆಲ್ಫಾ ಮತ್ತು ಬೀಟಾ ಥಾಲೆಸೇಮಿಯಾವನ್ನು ರೋಗದ ತೀವ್ರತೆಯನ್ನು ಹೊಂದಿಕೊಂಡು ಮೇಜರ್ ಥಾಲೆಸೇಮಿಯಾ ಮತ್ತು ಮೈನರ್ ಥಾಲೆಸೇಮಿಯಾ ಎಂದೂ ವಿಂಗಡಿಸಲಾಗಿದೆ. ತಂದೆ ತಾಯಂದಿರಿಬ್ಬರೂ ಅಸಹಜ ವಂಶವಾಹಿನಿಗಳನ್ನು ಪಡೆದಿದ್ದಲ್ಲಿ ತೀವ್ರತರವಾದ ಥಾಲೆಸೇಮಿಯಾ ಬರುತ್ತದೆ. ತಂದೆ ಅಥವಾ ತಾಯಿ ಯಾರಾದರೂ ಒಬ್ಬರಿಂದ ಮಾತ್ರ ಅಸಹಜ ವಂಶ ವಾಹಿನಿಗಳನ್ನು ಪಡೆದಿದ್ದಲ್ಲಿ, ಅದನ್ನು ಸಾಮಾನ್ಯ ಥಾಲೆಸೇಮಿಯಾ ಎಂದೂ ಕರೆಯುತ್ತಾರೆ ಈ ರೋಗದಲ್ಲಿ ರೋಗಿಗಳು ರೋಗವಾಹಕರಾಗಿರುತ್ತಾರೆ ಮತ್ತು ಯಾವುದೇ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ ಶÉೀಕಡಾ 1ರಷ್ಟು ಮಂದಿ ಮಾತ್ರ ಈ ರೀತಿಯ ಮೈನರ್ ಥಾಲೆಸೇಮಿಯಾದಿಂದ ಬಳಲುತ್ತಾರೆ.

Also Read  ಸೆ. 26: ವಿಶ್ವ ಸಂತಾನ ನಿಯಂತ್ರಣ ಜಾಗೃತಿ ದಿನ - ಡಾ.ಮುರಲೀ ಮೋಹನ ಚೂಂತಾರು


ರೋಗದ ಲಕ್ಷಣಗಳು ಏನು?
ರೋಗದ ತೀವ್ರತೆಗೆ ಹೊಂದಿಕೊಂಡು ಲಕ್ಷಣಗಳು ಕಂಡಬರುತ್ತದೆ. ಸಾಮಾನ್ಯವಾಗಿ ಹುಟ್ಟಿನಿಂದ 6 ತಿಂಗಳವರೆಗೆ ತಾಯಿಯಿಂದ ಬಳುವಳಿಯಾಗಿ ಬಂದ ಹಿಮೋಗ್ಲೋನಿನ್ ಮತ್ತು ನವಜಾತ ಶಿಶುಗಳಲ್ಲಿ ಬೇರೆ ರಚನೆಯುಳ್ಳ ಹಿಮೋಗ್ಲೋಬಿನ್ ಇರುವುದರಿಂದ ಯಾವುದೇ ರೋಗ ಲಕ್ಷಣ ಕಂಡು ಬರುವುದಿಲ್ಲ. 6 ತಿಂಗಳ ಬಳಿಕ ಈ ಫೀಟಲ್ ಹಿಮೋಗ್ಲೋಬಿನ್‍ಗಳ ಬದಲಾಗಿ ವಯಸ್ಕ ಹಿಮೋಗ್ಲೋಬಿನ್‍ಗಳು ರಕ್ತಕ್ಕೆ ಸೇರಿಕೊಳ್ಳುತ್ತದೆ. ಈ ಹಂತದಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತದೆ.
ಜಾಂಡಿಸ್, ಬಿಳಿಚಿಕೊಂಡ ಚರ್ಮ, ವಿಪರೀತ ಸುಸ್ತು, ಕಪ್ಪುಮೂತ್ರ, ನಿರಾಸಕ್ತಿ, ಎದೆನೋವು, ಕೈಕಾಲುಗಳು ಸಣ್ಣಗಾಗುವುದು, ಉಸಿರಾಡಲು ಕಷ್ಟವಾಗುವುದು, ಕಾಲಗಳಲ್ಲಿ ಸ್ನಾಯಗಳು ಹಿಡಿದುಕೊಳ್ಳುವುದು, ವೇಗದ ಹೃದಯದ ಬಡಿತ, ಆಹಾರ ಸೇವನೆ ಸರಿಯಾಗದಿರುವುದು, ಕುಂಠಿತಗೊಂಡ ಬೆಳವಣಿಗೆ, ನಿರಂತರ ತಲೆನೋವು, ತಲೆಸುತ್ತುವುದು, ಮತಿ ತಪ್ಪುವುದು, ಪದೇ ಪದೇ ಬರುವ ಸೋಂಕುಗಳು ಎಲ್ಲವೂ ಕಂಡು ಬರುತ್ತದೆ. ದೇಹದ ಎಲುಬುಗಳ ಒಳಗೆ ನ್ಯೂನತೆಗಳು ಕಂಡುಬರುತ್ತದೆ. ನಮ್ಮ ದೇಹದ ಎಲುಬಿನ ಒಳಗಿರುವ ಅಸ್ಥಿಮಜ್ಜೆಯಲ್ಲಿ ಈ ಹಿಮೋಗ್ಲೋಬಿನ್ ತಯಾರಾಗುತ್ತದೆ. ರಕ್ತದಲ್ಲಿನ ಕಬ್ಬಿಣ ಅಂಶಗಳನ್ನು ಹೀರಿಕೊಂಡು, ಹಿಮೋಗ್ಲೋಬಿನ್‍ನ ಪ್ರೋಟಿನ್ ತಯಾರಾಗುತ್ತದೆ. ವಂಶವಾಹಿನಿಗಳಲ್ಲಿನ ನ್ಯೂನತೆಯಿಂದಾಗಿ ಸಾಕಷ್ಟು ಹಿಮೋಗ್ಲೋಬಿನ್ ತಯಾರಿಸಲು ಸಾಧ್ಯವಾಗುವುದಿಲ್ಲ. ತನ್ನ ಶಕ್ತಿ ಮೀರಿ ಹಿಮೋಗ್ಲೋಬಿನ್‍ನ ತಯಾರಿಸಲು ಅಸ್ಥಿಮಜ್ಜೆ ಪ್ರಯತ್ನಿಸಿದಾಗ ಮೂಳೆಗಳು ತಮ್ಮ ರಚನೆಯನ್ನು ಮಾರ್ಪಾಡು ಮಾಡಿಕೊಳ್ಳಬೇಕಾದ, ಅನಿವಾರ್ಯತೆಗೆ ಸಿಲುಕುತ್ತದೆ. ಅತಿಯಾದ ಕಬ್ಬಿಣದ ಅಂಶವನ್ನು ರಕ್ತದಿಂದ ಹೀರಲ್ಪಟ್ಟು ದುಗ್ಧಗ್ರಂಥಿ, ಯಕೃತ್, ಹೃದಯಗಳಲ್ಲಿ ಈ ಕಬ್ಬಿಣದ ಅಂಶಗಳು ಶೇಖರಣೆಯಾಗುತ್ತದೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಬಹು ಅಂಗಾಂಗ ವೈಪಲ್ಯಕ್ಕೆ ಈ ರೋಗಿಗಳು ತುತ್ತಾಗುತ್ತಾರೆ. ರಕ್ತಹೀನತೆಯನ್ನು ಕಡಮೆ ಮಾಡಲು ಅತಿಯಾಗಿ ರಕ್ತ ಪೂರಣ ಮಾಡಿದರೆ, ದೇಹದ ಕಬ್ಬಿಣದ ಅಂಶ ಮತ್ತಷ್ಟು ಜಾಸ್ತಿಯಾಗುತ್ತದೆ. ಇದರಿಂದಾಗಿ ದೇಹದ ರಸದೂತಗಳು ಸ್ರವಿಸುವ ಗ್ರಂಥಿಗಳಲ್ಲಿ ಈ ಕಬ್ಬಿಣ ಶೇಖರಣೆಗೊಂಡು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ.


ತಡೆಗಟ್ಟುವುದು ಹೇಗೆ?
ತಂದೆ ತಾಯಂದಿರು ಈ ರೋಗದ ವಾಹಕರಾಗಿದ್ದಲ್ಲಿ, ಹೆತ್ತವರನ್ನು ಸಾಕಷ್ಟು ರೀತಿಯಲ್ಲಿ ಮನಪರಿವರ್ತನೆಯಾಗುವಂತೆ ಮಾಡುತ್ತಾg.É ಈ ರೀತಿಯಿದ್ದಲ್ಲಿ ಜೀವನ ಪರ್ಯಂತ, ಹುಟ್ಟುವ ಮಕ್ಕಳಿಗೆ ತೀವ್ರತರ ಥಾಲೆಸÉೀಮಿಯಾ ರೋಗ ಬರುವ ಸಾಧ್ಯತೆ ಇರುವುದರಿಂದ, ಮಕ್ಕಳಾಗದಂತೆ ಮಾರ್ಗದರ್ಶನ ನೀಡಲಾಗುತ್ತದೆ. ಈ ರೋಗಕ್ಕೆ ಸಂಪೂರ್ಣ ಚಿಕಿತ್ಸೆ ಇಲ್ಲದ ಕಾರಣದಿಂದ ರಕ್ತ ಪರೀಕ್ಷೆಗಳ ಮುಖಾಂತರ ಮಗು ಹುಟ್ಟುವ ಮೊದಲೇ ರೊಗವಿದೆಯೇ ಎಂದು ಪತ್ತೆ ಮಾಡಲಾಗುತ್ತದೆ. ಅದೇ ರೀತಿ ಮದುವೆಯಾಗುವಾಗ ಇಬ್ಬರು ರೋಗವಾಹಕರು ಮದುವೆಯಾಗದಂತೆ ಎಚ್ಚರವಹಿಸಬೇಕು. ಹಾಗೇ ಮಾಡಿದಲ್ಲಿ ಹುಟ್ಟುವ ಮಕ್ಕಳಿಗೆ ತೀವ್ರತರವಾದ ಥಾಲೆಸೇಮಿಯಾ ಬರುವ ಸಾಧ್ಯತೆ ಕಡಮೆ ಇರುತ್ತದೆ. ಮಗು ಹುಟ್ಟುವ ಮೊದಲೇ ರಕ್ತ ಪರೀಕ್ಷೆ, ಹಿಮೋಗ್ಲೋಬಿನ್ ರಚನೆಯನ್ನು ಅಭ್ಯಸಿಸಿ ಒಂದು ವೇಳೆ ಹುಟ್ಟುವ ಮಗುವಿಗೆ ರೋಗವಿದೆಯೆಂದಾದಲ್ಲಿ ಹೆತ್ತವರಿಗೆ ಸಾಕಷ್ಟು ಮಾರ್ಗದರ್ಶನ ನೀಡಲಾಗುತ್ತದೆ.

Also Read  ಆಕರ್ಷಣ ತಂತ್ರ ಮತ್ತು ದಿನ ಭವಿಷ್ಯ


ಪತ್ತೆ ಹಚ್ಚುವುದು ಹೇಗೆ?
ರಕ್ತ ಪರೀಕ್ಷೆ ಮುಖಾಂತರ ರಕ್ತಹೀನತೆಯನ್ನು ಪತ್ತೆ ಹಚ್ಚಲಾಗುತ್ತದೆ. ಅದೇ ರೀತಿ ಹಿಮೋಗ್ಲೋಬಿನ್‍ನ ರಚನೆಯನ್ನು ‘ಇಲೆಕ್ಟ್ರೋ ಪೋರೆಸಿಸ್’ ಎಂಬ ವಿಧಾನದಿಂದ ಅಭ್ಯಸಿಸಲಾಗುತ್ತದೆ. ಈ ಪ್ರೊಟಿನ್‍ನ ರಚನೆ ವಿನ್ಯಾಸ ಮತ್ತು ಗಾತ್ರಗಳನ್ನು ಪತ್ತೆ ಹಚ್ಚಿ ರೋಗವನ್ನು ನಿರ್ಣಯಿಸುತ್ತಾರೆ. ಕೆಂಪು ರಕ್ತಕಣಗಳ ರಚನೆ, ಗಾತ್ರ, ಸಂಖ್ಯೆಯನ್ನು ಪತ್ತೆ ಹಚ್ಚಲಾಗುತ್ತದೆ. ಥಾಲೆಸೇಮಿಯಾ ರೋಗದಲ್ಲಿ ಕೆಂಪು ರಕ್ತಕಣಗಳ ರಚನೆ ವಿಭಿನ್ನವಾಗಿರುತ್ತಾರೆ. ಬೇರೆ ಬೇರೆ ಗಾತ್ರ ಮತ್ತು ರಚನೆಯ ಕೆಂಪು ರಕ್ತ ಕಣಗಳು ರಕ್ತದಲ್ಲಿ ಕಂಡುಬರುತ್ತದೆ. ಎಲ್ಲ ರೀತಿಯ ಪರೀಕ್ಷೆಗಳ ಬಳಿಕ, ದೇಹದಲ್ಲಿನ ರೋಗ ಲಕ್ಷಣಗಳ ಜೊತೆಗೆ ಹೊಂದಾಣಿಕೆ ಮಾಡಿ, ಯಾವ ರೀತಿಯ ಥಾಲಸೇಮಿಯಾ ಎಂದು ಪತ್ತೆ ಹಚ್ಚಲಾಗುತ್ತದೆ.


ಚಿಕಿತ್ಸೆ ಹೇಗೆ? :-
ಸಾಮಾನ್ಯ ಥಾಲಸೇಮಿಯಾದಲ್ಲಿ ರೋಗದ ಲಕ್ಷಣಗಳು ತೀವ್ರವಾಗಿರುವುದಿಲ್ಲ ಈ ರೋಗಿಗಳಿಗೆ ನಿರಂತರವಾದ ವೈದ್ಯಕೀಯ ಸಲಹೆ, ಸೂಚನೆ ಮತ್ತು ಸಂದರ್ಶನ ನೀಡುತ್ತಿರಬೇಕು. ಯಾವುದೇ ಔಷಧಿಯ ಅಗತ್ಯವಿರುವುದಿಲ್ಲ. ಆದರೆ ತೀವ್ರತರವಾದ ಥಾಲೆಸೇಮಿಯಾ ಅಥವಾ ಬೀಟಾ ಥಾಲಸೇಮಿಯಾ ರೋಗಿಗಳಿಗೆ ನಿರಂತರವಾದ ಚಿಕಿತ್ಸೆ ಅತೀ ಅಗತ್ಯ. ಈ ರೋಗಿಗಳು ಹೆಚ್ಚಾಗಿ ಕಬ್ಬಿಣದ ಕೊರತೆಯಿಂದ ಉಂಟಾಗುವ ರಕ್ತ ಹೀನತೆ ಎಂದು ಚಿಕಿತ್ಸೆಗೊಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅತಿಯಾದ ಕಬ್ಬಿಣದ ಅಂಶವಿರುವ ಆಹಾರಗಳು ಮತ್ತು ಔಷಧಿಗಳಿಂದ ಇಂತಹ ರೋಗಿಗಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಇಂತಹಾ ರೋಗಿಗಳಲ್ಲಿ ಕಬ್ಬಣದ ಆಂಶ ಜಾಸ್ತಿ ಇರುವ ಆಹಾರ ಪದಾರ್ಥಗಳನ್ನು ಬಳಸಬಾರದು ಮತ್ತು ಕಬ್ಬಿಣದ ಅಂಶಗಳಿರುವ ಔಷಧಿ ಬಳಸಬಾರದು. ತಂದೆ ತಾಯಂದಿರಿಬ್ಬರೂ ವಾಹಕರಾಗಿದ್ದಲ್ಲಿ ಸೂಕ್ತ ಸಮಾಲೋಚನೆ ನಿಡಿ ಮಕ್ಕಳಾಗದಂತೆ ಎಚ್ಚರವಹಿಸುವುದು ಅಗತ್ಯ. ಹೆಚ್ಚಾಗಿ ತೀವ್ರತರವಾದ ಥಾಲೆಸೇಮಿಯಾ ರೋಗಿಗಳಿಗೆ ರಕ್ತ ಹೀನತೆಯನ್ನು ತಡೆಯಲು ಜೀವಮಾನವಿಡೀ ನಿರಂತರವಾದ ರಕ್ತ ಪೂರಣ ವ್ಯವಸ್ಥೆ ಬೇಕಾಗಬಹುದು. ಬಹಳ ಜಾಗರೂಕತೆಯಿಂದ ಈ ಪ್ರಕ್ರಿಯೆಯನ್ನು ನಡೆಸತಕ್ಕದ್ದು. ಈ ರೀತಿ ಮಾಡುವುದರಿಂದ ರೋಗಿ ಗುಣಮುಖವಾಗದಿದ್ದರೂ, ರೋಗಿಯ ಜೀವಿತಾವಧಿ ವಿಸ್ತರಿಸಲ್ಪಡುತ್ತದೆ. ಅತಿಯಾದ ರಕ್ತ ಪೂರಣದಿಂದ ರೋಗಿಯ ರಕ್ತದಲ್ಲಿ ಅತಿಯಾದ ಕಬ್ಬಿಣಾಂಶ ಶೇಖರಣೆಯಾಗದಂತೆ ಮಾಡಲು, ಹಲವಾರು ಔಷಧಿಗಳು ಲಭ್ಯವಿದೆ. ಈ ಔಷಧಿಗಳು ಕಬ್ಬಿಣ ರಕ್ತದಲ್ಲಿ ಶೇಖರಣೆಯಾಗದಂತೆ ತಡೆಯುತ್ತಿದೆ. ಅಸ್ಥಿಮಜ್ಜೆ ಕಸಿ ಖಂಡಿತವಾಗಿಯೂ ತೀವ್ರತರವಾದ ಥಾಲೆಸೇಮಿಯಾ ರೋಗಿಗಳಿಗೆ ನಿಜವಾದ ಸಂಜೀವಿನಿ ಎಂದರೂ ತಪ್ಪಲ್ಲ. ಕಿರಿ ವಯಸ್ಸಿನ ರೋಗಿಗಳಿಗೆ ಸೂಕ್ತವಾದ ದಾನಿಯಿಂದ ಪಡೆದ ಅಸ್ಥಿಮಜ್ಜೆ ಕಸಿ ವರದಾನವಾಗಬಹುದು, ಈ ರೀತಿಯ ಚಿಕಿತ್ಸೆಯಲ್ಲಿ 80 ರಿಂದ 90% ಧನಾತ್ಮಕ ಫಲಿತಾಂಶ ದೊರೆಯುತ್ತದೆ. ಆದರೆ ಸೂಕ್ತದಾನಿಗಳು ಸಿಗುವುದು ಅಷ್ಟು ಸುಲಭದ ಮಾತಲ್ಲ. ಅದರ ಜೊತೆಗೆ ಅಸ್ಥಿಮಜ್ಜೆ ಕಸಿಮಾಡಲು ಏನಿಲ್ಲವೆಂದರೂ 15ರಿಂದ 20 ಲಕ್ಷದಷ್ಟು ಹಣದ ಅವಶ್ಯಕತೆ ಇರುವುದರಿಂದ ಸಾಮಾನ್ಯರಿಗೂ ಈ ಚಿಕಿತ್ಸೆ ದೊರಕುವುದು ಕಷ್ಟ ಸಾಧ್ಯವಾಗಿದೆ. ಕೆಲವೊಮ್ಮೆ ರೋಗಿಯ ರೋಗದ ಲಕ್ಷಣಗಳು ತೀವ್ರವಾಗಿದ್ದಲ್ಲಿ, ಪಿತ್ತಕೋಶ ಮತ್ತು ದುಗ್ಧಗ್ರಂಥಿಗಳನ್ನೂ ಶಸ್ತ್ರ ಚಿಕಿತ್ಸೆ ಮುಖಾಂತರ ತೆಗೆಯಲಾಗುತ್ತದೆ. ಚಿಕಿತ್ಸೆಯ ಪ್ರಮಾಣ, ಅಗತ್ಯತೆ ಮತ್ತು ಕಾಲವನ್ನು ವೈದ್ಯರೇ ನಿರ್ಧರಿಸುತ್ತಾರೆ.

Also Read  ಎ.ಜಿ. ನೂರಾನಿ ಎಂಬ ನಿರ್ಭೀತ ವಿದ್ವಾಂಸ


ಕೊನೆಮಾತು
ಶತಮಾನಗಳಿಂದಲೂ ಮನುಕುಲವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಈ ಥಾಲಸೇಮಿಯಾ ರೋಗ ವ್ಯಕ್ತಿಯನ್ನು ಕ್ಷಣಕ್ಷಣವೂ ಬಾಧಿಸಿ ಜೀವನವನ್ನೇ ಹೈರಾಣಾಗಿಸುತ್ತದೆ. ಸಂಪೂರ್ಣವಾಗಿ ಚಿಕಿತ್ಸೆ ನೀಡಿ ಗುಣಪಡಿಸಲಾಗದ ಈ ಕಾಯಿಲೆಗೆ ಅಸ್ಥಿಮಜ್ಜೆ ಕಸಿ ಮಾತ್ರ ರಾಮಬಾಣವಾಗಬಲ್ಲದು. ಆರೊಗ್ಯವಂಥ ದಾನಿಯಿಂದ ಪಡೆದ ಬಿಳಿರಕ್ತಕಣಗಳ ಹೊಂದಾಣಿಕೆಯಾಗುವ ಊಐಂ ಆಂಟಿಜೆನ್ ಹೊಂದಾಣಿಕೆಯಾಗದ ಅಸ್ಥಿಮಜ್ಜೆಯನ್ನು ಕಸಿ ಮಾಡಿದಲ್ಲಿ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ಹೊಂದಾಣಿಕೆಯಾಗುವ ದಾನಿಗಳ ಕೊರತೆಯಿಂದಾಗಿ ಮತ್ತು ಅತಿಯಾದ ದುಬಾರಿ ವೆಚ್ಚದ ಕಾರಣದಿಂದಾಗಿ ಎಲ್ಲರಿಗೂ ಈ ಚಿಕಿತ್ಸೆ ದೊರಕುವುದು ಸಾಧ್ಯವಿಲ್ಲದ ಮಾತು. ಈ ನಿಟ್ಟಿನಲ್ಲಿ ರೋಗಿಯ ಅಸಹಜ ಹಿಮೋಗ್ಲೋಬಿನ್‍ನಲ್ಲಿನ ಆಲ್ಫಾ ಮತ್ತು ಬೀಟಾ ಎಂಬ ಪ್ರೋಟಿನ್ ಚೈನ್‍ನ್ನು ಮಾರ್ಪಾಡು ಮಾಡಿ. ಸಹಜ ಹಿಮೋಗ್ಲೋಬಿನ್‍ಗಳನ್ನು ನಿರ್ಮಿಸಿ ರೋಗವನ್ನು ಗುಣಪಡಿಸಲು ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗಳು ಯಶಸ್ವಿಯಾದಲ್ಲಿ ರೋಗಿಯ ಅಸ್ಥಮಜ್ಜೆಯನ್ನೇ ತೆಗೆದು, ಅಸಹಜ ಹಿಮೋಗ್ಲೋಬಿನ್‍ಗಳನ್ನು ಮಾರ್ಪಡಿಸಿದಲ್ಲಿ ಅದುವೇ ರೋಗ ಚಿಕಿತ್ಸೆಗೆ ಬ್ರಹ್ಮಾಸ್ರವಾಗಿ ಪರಿಣಮಿಸಿ ಥಾಲೆಸೇಮಿಯಾ ರೋಗಿಗಳಿಗೆ ಸಂಜೀವಿನಿ ಆಗುವ ದಿನಗಳು ದೂರವಿಲ್ಲ. ಈ ನಿಟ್ಟಿನಲ್ಲಿ ಸಂಶೋಧನೆಗಳು ಯಶಸ್ವಿಯಾಗಲಿ ಮತ್ತು ರೋಗಿಗಳಿಗೆ ವರದಾನವಾಗಿಲಿ ಎಂದು ತುಂಬು ಹೃದಯದಿಂದ ಹಾರೈಸೋಣ. ಅದರಲ್ಲಿಯೇ ಮನುಕುಲದ ಒಳಿತು ಮತ್ತು ಉನ್ನತಿ ಅಡಗಿದೆ.

ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323

 

error: Content is protected !!
Scroll to Top