(ನ್ಯೂಸ್ ಕಡಬ) newskadaba.com ಸುಳ್ಯ, ಎ. 27. ರಾಜ್ಯದಲ್ಲಿ ಇಂದಿನಿಂದ 14 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗಿದ್ದು, ಈ ಸಂದರ್ಭದಲ್ಲಿ ರಕ್ತದಾನ ಮಾಡಲು ಸಂಚರಿಸುವ ರಕ್ತದಾನಿಗಳಿಗೆ ನಿರ್ಭೀತಿಯಿಂದ ಸಂಚರಿಸಲು ಅವಕಾಶ ಮಾಡಿಕೊಡಿ ಎಂದು ದ.ಕ ಜಿಲ್ಲಾ SKSSF ವಿಖಾಯ ರಕ್ತದಾನಿ ಬಳಗದ ಜಿಲ್ಲಾ ಉಸ್ತುವಾರಿ ತಾಜುದ್ದೀನ್ ಟರ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರಿಕಾ ಮುಖಾಂತರ ಒತ್ತಾಯಿಸಿದ್ದಾರೆ.
ರಂಝಾನ್ ಉಪವಾಸದ ಸಂದರ್ಭದಲ್ಲಿ ರಕ್ತದಾನ ಮಾಡಲು ರಾತ್ರಿ 7 ಗಂಟೆಯ ನಂತರ ಬ್ಲಡ್ ಬ್ಯಾಂಕ್ ಗಳಿಗೆ ತೆರಳುವ ಅನಿವಾರ್ಯತೆ ಇರುವುದರಿಂದ ಹಾಗೂ ಜಿಲ್ಲೆಯ ಎಲ್ಲಾ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಕೊರತೆ ಇರುವುದರಿಂದ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. SKSSF ವಿಖಾಯ ರಕ್ತದಾನಿ ಬಳಗವು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಒಬ್ಬೊಬ್ಬರಿಗೆ ಉಸ್ತುವಾರಿಯನ್ನು ನೀಡಿ ರಕ್ತದಾನ ಮಾಡುವುದರಲ್ಲಿ ಸಕ್ರಿಯವಾಗಿದ್ದು, ಕಳೆದ ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ರಕ್ತದಾನ ಅಭಿಯಾನ ನಡೆಸಿ 1500 ಕ್ಕೂ ಅಧಿಕ ರಕ್ತ ಸಂಗ್ರಹ ಮಾಡಿ ಜಿಲ್ಲಾಧಿಕಾರಿಗಳಿಂದ ಅಭಿನಂದನಾ ಪತ್ರವನ್ನೂ ಪಡೆದು ಜಿಲ್ಲೆಯಲ್ಲಿ ಮಾದರಿ ಸೇವೆ ನೀಡುತ್ತಿದೆ ಎಂದರು.