(ನ್ಯೂಸ್ ಕಡಬ) newskadaba.com ಕಡಬ, ಎ.23. ರಾಜ್ಯದಲ್ಲಿ ಕೊರೋನಾ ಸೋಂಕು ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಸರಕಾರವು ಕಟ್ಟನಿಟ್ಟಿನ ಆದೇಶಗಳನ್ನು ಜಾರಿ ಮಾಡಿದ್ದು, ಕೊರೋನಾ ನಿರ್ಮೂಲನೆಗೆ ಸರಕಾರದ ಆಡಳಿತ ವ್ಯವಸ್ಥೆಯೊಂದಿಗೆ ಸರಕಾರದ ಆದೇಶದ ಪಾಲನೆಗೆ ಸಾರ್ವಜನಿಕರು ಅಗತ್ಯವಾಗಿ ಸಹಕರಿಸಬೇಕು ಎಂದು ಕಡಬ ತಹಶಿಲ್ದಾರ್ ಅನಂತಶಂಕರ್ ಮನವಿ ಮಾಡಿದರು.
ಅವರು ಶುಕ್ರವಾರ ಕಡಬ ಅಂಬೇಡ್ಕರ್ ಭವನದಲ್ಲಿ ನಡೆದ ಕಡಬ ತಾಲೂಕು ಮಟ್ಟದ ಕೋವಿಡ್ ಕಾರ್ಯಪಡೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜನರ ಆರೋಗ್ಯ ಅವರ ಕೈಯಲ್ಲಿಯೇ ಇದೆ, ಸರಕಾರ ರೂಪಿಸಿದ ಕಾನೂನು ಹಾಗೂ ಆದೇಶಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅನುಷ್ಠಾನ ಮಾಡಲು ಸಹಕರಿಸಿದರೆ ಕೋವಿಡ್ ನಿಯಂತ್ರಣ ಸುಲಭವಾಗಲಿದೆ, ಆದ್ದರಿಂದ ಸರಕಾರದ ಆದೇಶಗಳನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬೇಡಿ ಎಂದರು.
ವಾರಾಂತ್ಯದ ಶನಿವಾರ ಹಾಗೂ ಭಾನುವಾರ ಲಾಕ್‍ಡೌನ್ ಇರುವುದರಿಂದ ಬೆಳಿಗ್ಗೆ 6 ರಿಂದ 10 ಗಂಟೆಯ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುತ್ತದೆ. ಇದನ್ನು ದುರುಪಯೋಗಪಡಿಸಿಕೊಂಡು ಅನಗತ್ಯವಾಗಿ ಪೇಟೆಯಲ್ಲಿ ತಿರುಗಾಡುವುದು ಕಂಡು ಬಂದರೆ ಕ್ರಮ ಜರಗಿಸುವುದು ಅನಿವಾರ್ಯವಾದೀತು. ರಾತ್ರಿ ಕರ್ಫ್ಯೂ ಇರುವ ಕಾರಣ ರಾತ್ರಿ ಹೊತ್ತು ಯಾವುದೇ ಕಾರ್ಯಕ್ರಮಗಳನ್ನು ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮದುವೆ ಕಾರ್ಯಗಳನ್ನು ನಡೆಸುವವರು ಐವತ್ತು ಜನರಿಗಿಂತ ಹೆಚ್ಚು ಜನ ಸೇರಿಸಿದರೆ ಅವರ ವಿರುದ್ಧ ಕಾರ್ಯಪಡೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ. ಮದುವೆ ಹಾಗೂ ಮೆಹಂದಿಗೆ ಆಯಾ ಸ್ಥಳೀಯಾಡಳಿತದಿಂದ ಪ್ರತ್ಯೇಕ ಅನುಮತಿ ಕಡ್ಡಾಯವಾಗಿದ್ದು, ನೇಮ, ಕೋಲ, ಮತಪ್ರವಚನ ಇನ್ನಿತರ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬಾರದು, ಇದು ಎಲ್ಲಾ ಸಮುದಾಯದವರಿಗೆ ಅನ್ವಯಿಸುತ್ತದೆ, ದೈವ ನರ್ತಕರು ಯಾವುದೇ ನರ್ತನ ಸೇವೆಗೆ ಒಪ್ಪಿಕೊಳ್ಳದಂತೆ ಪ್ರತೀ ಗ್ರಾಮ ಮಟ್ಟದಲ್ಲಿ ಅವರಿಗೆ ನೋಟೀಸ್ ನೀಡಲಾಗುವುದು ಎಂದು ತಹಶಿಲ್ದಾರ್ ಎಚ್ಚರಿಸಿದರು.
ಕಡಬ ತಾಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳನ್ನೊಳಗೊಂಡ ತಾಲೂಕು ಮಟ್ಟದ ಕೋವಿಡ್ ಕಾರ್ಯಪಡೆಯ ಸಭೆಯು ಕಡಬ ತಹಶಿಲ್ದಾರ್ ಅನಂತಶಂಕರ್ ಅವರ ನೇತೃತ್ವದಲ್ಲಿ ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ನಡಯಿತು. ಈ ಸಂದರ್ಭದಲ್ಲಿ ಪ್ರತೀ ಗ್ರಾಮ ಮಟ್ಟದ ಕಾರ್ಯಪಡೆ ಅನುಸರಿಸಬೆಕಾದ ನಿಯಮಾವಳಗಳ ಬಗ್ಗ ವಿವರಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟನಿಟ್ಟಿನ ಕ್ರಮ ಜರಗಿಸುವಂತೆ ಸೂಚನೆ ನೀಡಿದರು. ಆನರಲ್ಲಿ ಜಾಗೃತಿ ಮೂಡಿಸಿ ಕೊರೊನಾ ನಿರ್ಮೂಲನೆಗೆ ಎಲ್ಲರೂ ಕಟಿಬದ್ದರಾಗಿರಬೇಕು ಎಂದು ಹೇಳಿದರು.
ಕಡಬ ತಾಲೂಕು ಪಂಚಾಯಿತಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ವೈ.ಕುಸುಮಾ, ಕಡಬ ಪಟ್ಟಣ ಪಂ. ಮುಖ್ಯಾಧಿಕಾರಿ ಅರುಣ್ ಕೆ, ಮೆಸ್ಕಾಂ ಎಇಇ ಗಳಾದ ಜೈಪ್ರಕಾಶ್, ಸಜಿಕುಮಾರ್, ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ, ಮಧುಕುಮಾರ್, ಕೊಯಿಲ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೆಶಕಿ ಡಾ|ಅಪರ್ಣ ಹೆಬ್ಬಾರ್, ಸಿಡಿಪಿಒ ಶ್ರೀಲತಾ, ಕಡಬ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಪ್ತಶ್ರೀ, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಸುಚಿತ್ರಾ ರಾವ್, ಕಡಬ ಠಾಣಾ ಎಸ್‍ಐ ರುಕ್ಮ ನಾಯ್ಕ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಡಬ ಉಪತಹಶಿಲ್ದಾರ್ ಮನೋಹರ ಕೆ.ಟಿ ಸ್ವಾಗತಿಸಿ, ಕಂದಾಯ ನಿರೀಕ್ಷಕ ಅವಿನ್ ರಂಗತ್‍ಮಲೆ ವಂದಿಸಿದರು. ಕಡಬ ತಾ. ಪಂ. ಸಹಾಯಕ ನಿರ್ದೆಶಕ ಚೆನ್ನಪ್ಪ ಗೌಡ ಕಜೆಮೂಲೆ ಸಹಕರಿಸಿದರು.