(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಎ.19. ಬೈಕ್ ಗಳೆರಡು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್ ಸವಾರನೋರ್ವ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಉರುವಾಲು ಪದವು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮೃತ ಸವಾರನನ್ನು ರಾಜೇಶ್ (30) ಎಂದು ಗುರುತಿಸಲಾಗಿದೆ. ಸಹ ಸವಾರ ಪುರಂದರ ಹಾಗೂ ಇನ್ನೊಂದು ಬೈಕ್ ಚಲಾಯಿಸುತ್ತಿದ್ದ ಶಾಫಿ ಎಂಬವರು ಗಂಭೀರ ಗಾಯಗೊಂಡಿದ್ದು, ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಪ್ಪೆಟ್ಟಿ ಕಡೆಯಿಂದ ಬಂದಾರು ಕಡೆ ರಾಜೇಶ್ ಅವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಹಾಗೂ ಎದುರಿನಿಂದ ಶಾಫಿ ಅವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ನಡುವೆ ಉರುವಾಲು ಮಸೀದಿ ಸಮೀಪದ ತಿರುವಿನಲ್ಲಿ ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಮೂವರೂ ರಸ್ತೆಗೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ರಾಜೇಶ್ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು. ಪುರಂದರ ಅವರ ತಲೆಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಯಲ್ಲಿದ್ದಾರೆ.
ಅಪಘಾತದ ಸಂದರ್ಭ “ಬಾಬಾ ಆ್ಯಂಬುಲೆನ್ಸ್ ನ ನೌಫಾಲ್” ಆಪತ್ಭಾಂದವನಾಗಿ ಬರುತ್ತಿದ್ದು, ಇಂದು ಕೂಡಾ ನೌಫಾಲ್ ಅಪಘಾತವಾದ ಎರಡು ನಿಮಿಷದಲ್ಲಿ ಸ್ಥಳದಲ್ಲಿದ್ದು, ಗಾಯಾಳುಗಳನ್ನು ಅಲ್ಲಿನ ದುರ್ಗಮ ರಸ್ತೆಯಲ್ಲಿ 18 ಕಿ.ಮೀ. ದೂರದ ಪುತ್ತೂರು ಆಸ್ಪತ್ರೆಗೆ ಕೇವಲ 12 ನಿಮಿಷದಲ್ಲಿ ತಲುಪಿಸಿದ್ದಾರೆ. ಇವರ ಈ ಕಾರ್ಯ ಸಾರ್ವಜನಿಕ ಶ್ಲಾಘನೆಗೆ ಪಾತ್ರವಾಗಿದೆ.








