(ನ್ಯೂಸ್ ಕಡಬ) newskadaba.com ಮಂಗಳೂರು, ಅ.24. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಭಾನುವಾರದಂದು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಮೀನಿನ ಖಾದ್ಯ ತಿಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಕುರಿತು ಆಸ್ತಿಕ ವಲಯದಲ್ಲಿ ಭಾರೀ ಚರ್ಚೆಗಳು ಆರಂಭವಾಗಿದೆ.
ಈ ಕುರಿತು ಮಾಧ್ಯಮಗಳಲ್ಲಿ ಬೆಳಗಿನಿಂದಲೂ ಚರ್ಚೆಗಳು ಆರಂಭವಾಗುತ್ತಿದ್ದಂತೆ ಸ್ವತಃ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಹಾಗೂ ರಾಜ್ಯದ ಮುಖ್ಯಮಂತ್ರಿಯವರು ಸ್ಪಷ್ಟನೆ ನೀಡಿದ್ದಾರೆ.
ಸಿದ್ದರಾಮಯ್ಯನವರು ಮೀನು ತಿಂದು ದೇವಸ್ಥಾನ ಪ್ರವೇಶಿಸಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಒಂದು ದೊಡ್ಡ ವಿವಾದದ ರೀತಿಯಲ್ಲಿ ಪ್ರಕಟವಾಗುತ್ತಿದ್ದ ಬೆನ್ನಲ್ಲೇ ಮಾಂಸ ಸೇವಿಸಿ ಧರ್ಮಸ್ಥಳ ದೇವಸ್ಥಾನ ಪ್ರವೇಶಿಸಬಾರದು ಎಂಬ ನಿಯಮ ರೂಪಿಸಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಸ್ಪಷ್ಟಪಡಿಸಿ ವಿವಾದಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ.
ಇದರ ಜೊತೆಗೆ ಧಾರವಾಡದಲ್ಲಿ ಕಾಂಗ್ರೆಸ್ ಸಮಾವೇಶದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದೇವರು ಮಾಂಸಾಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಬರಬೇಡಿ ಎಂದು ಎಲ್ಲೂ ಹೇಳಲಿಲ್ಲ. ಬೇಡರ ಕಣ್ಣಪ್ಪ ಕೂಡಾ ಶಿವನಿಗೆ ಜಿಂಕೆ ಮಾಂಸ ನೈವೇದ್ಯ ಮಾಡಿದ್ದ. ಮಾಂಸ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ ಎಂದು ತಾನು ತಿಂದದ್ದನ್ನು ಸಮರ್ಥಿಸುತ್ತಾ ಯಾವ ದೇವರು ಕೂಡಾ ಮಾಂಸ ಆಹಾರ ಸೇವನೆ ಮಾಡಬೇಡಿ ಎಂದು ಹೇಳುತ್ತಾರಾ ಎಂದು ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡರು.
ಸಿಎಂ ಸಿದ್ದರಾಮಯ್ಯ ಜೊತೆ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್ ಅವರು ಮಂಜುನಾಥನ ದರ್ಶನ ಪಡೆದಿದ್ದರು. ಪುಣ್ಯ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರು ಮಾಂಸಹಾರವನ್ನು ಸೇವಿಸದೇ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಾರೆ. ಆದರೆ ಸಿಎಂ ಸಿದ್ದರಾಮಯ್ಯ ಮೀನು ಮಾಂಸ ಸೇವಿಸಿ ಮಂಜುನಾಥನ ದರ್ಶನ ಪಡೆದಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು.