ಕಾಸರಗೋಡು: ಯೂತ್ ಲೀಗ್ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ➤ ಯೂತ್ ಲೀಗ್ ಕಾರ್ಯಕರ್ತನ ಮನೆಗೆ ಕಚ್ಚಾ ಬಾಂಬ್ ಎಸೆದು, ಮನೆಗೆ ನುಗ್ಗಿ ಸಹೋದರರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ

(ನ್ಯೂಸ್ ಕಡಬ) newskadaba.com ಕಾಸರಗೋಡು, ಎ. 07. ಚುನಾವಣೆಯ ಬಳಿಕ ಯೂತ್ ಲೀಗ್ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಕಣ್ಣೂರಿನಲ್ಲಿ ನಡೆದ ಘರ್ಷಣೆಯಲ್ಲಿ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತನೋರ್ವ ಹತ್ಯೆಗೀಡಾದ ಘಟನೆ ನಡೆದಿದೆ.

ಮೃತರನ್ನು ಕೂತುಪರಂಬ ಪುಳ್ಳಕರೆಯ ಮನ್ಸೂರ್ (22) ಎಂದು ಗುರುತಿಸಲಾಗಿದೆ. ಅವರ ಸಹೋದರ ಮೊಹ್ಸಿನ್ (27) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಮಂಗಳವಾರ ರಾತ್ರಿ 8:30ರ ಸುಮಾರಿಗೆ ತಂಡವೊಂದು ಮನೆಗೆ ಕಚ್ಚಾ ಬಾಂಬ್ ಎಸೆದು, ಬಳಿಕ ಮನೆಯೊಳಗೆ ನುಗ್ಗಿ ಸಹೋದರರಿಬ್ಬರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಮನ್ಸೂರ್ ಹಾಗೂ ಮೊಹ್ಸಿನ್ ಅವರನ್ನು ಕೋಝಿಕ್ಕೋಡ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮನ್ಸೂರ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಂಗಳವಾರದಂದು ಚುನಾವಣಾ ಮತಗಟ್ಟೆಯ ಬಳಿ ಯೂತ್ ಲೀಗ್ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಮನ್ಸೂರ್ ರ ಸಹೋದರ ಮೊಹ್ಸಿನ್ ಅವರು ಮತಗಟ್ಟೆ ಯುಡಿಎಫ್ ಏಜಂಟ್ ಆಗಿದ್ದರು. ಚುನಾವಣೆ ಮುಗಿದು ಮನೆಗೆ ತೆರಳುತ್ತಿದ್ದಾಗ ಮೊಹ್ಸಿನ್ ರಿಗೆ ತಂಡವೊಂದು ಬೆದರಿಕೆ ಒಡ್ಡಿದ್ದು, ರಾತ್ರಿ ವೇಳೆ ಮನೆಗೆ ನುಗ್ಗಿದ ತಂಡವು ಇಬ್ಬರ ಮೇಲೆ ಏಕಾಏಕಿ ಮಾರಣಾಂತಿಕ ದಾಳಿ ನಡೆಸಿ ಬಳಿಕ ಪರಾರಿಯಾಗಿದೆ. ಕೃತ್ಯಕ್ಕೆ ಸಂಬಂಧಿಸಿ ಓರ್ವ ಸಿಪಿಎಂ ಕಾರ್ಯಕರ್ತನನ್ನು ಕೂತುಪರಂಬ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Also Read  ಕಟ್ಟಿಗೆಯಿಂದ ಹೊಡೆದು ಪತ್ನಿಯ ಕೊಂದ ಪತಿ ಮಹಾಶಯ ➤ ಗಂಡ - ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ

error: Content is protected !!
Scroll to Top