ಗ್ಯಾಸ್ ಟ್ಯಾಂಕರ್ – ಕಾರು ಮಧ್ಯೆ ಮುಖಾಮುಖಿ ಢಿಕ್ಕಿ ➤ ಗಾಯಾಳುಗಳ ಪೈಕಿ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.30. ಇಂದು ಬೆಳಿಗ್ಗೆ ಪಾಣೆ ಮಂಗಳೂರಿನಲ್ಲಿ ಅನಿಲ ಸಾಗಾಟದ ಟ್ಯಾಂಕರೊಂದು ಮಾರುತಿ ಇಕೋ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ಮುಲ್ಕಿ ಸಮೀಪದ ಕಿನ್ನಿಗೋಳಿ ಐಕಳ ನಿವಾಸಿ ಗೋಪಾಲ್(41) ಎಂದು ಗುರುತಿಸಲಾಗಿದೆ. ಇನ್ನುಳಿದಂತೆ ರಘುನಾಥ್, ಶೇಖರ್, ಮುದರ, ರಾಜೇಶ್ ಹಾಗೂ ಸಂದೀಪ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಕಳ ನಿವಾಸಿಗಳು ಸುಳ್ಯ ತಾಲೂಕಿನ ನಿಂತಿಕಲ್ಲು ಎಂಬಲ್ಲಿ ಕೊರಗಜ್ಜ ದೈವದ ನರ್ತನ ಸೇವೆ ಸಲ್ಲಿಸಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಇವರಿದ್ದ ಕಾರಿಗೆ ಪಾಣೆಮಂಗಳೂರು ಸಮೀಪಿಸುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಬಂದ ಗ್ಯಾಸ್ ಟ್ಯಾಂಕರ್ ಕಾರಿಗೆ ಮುಖಾಮುಖಿ ಢಿಕ್ಕಿ ಹೊಡೆದು ಅವಘಡ‌ ಸಂಭವಿಸಿತ್ತು. ಢಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣೆಯ ಎಸ್‌ಐ ರಾಜೇಶ್ ಮತ್ತು ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದರು.

Also Read  ಕನ್ನಡ ಮಾಣಿಕ್ಯ ಪ್ರಶಸ್ತಿಗೆ ಡಾ. ಹಾಜಿ ಎಸ್.ಅಬೂಬಕರ್ ಆರ್ಲಪದವು ಆಯ್ಕೆ

 

 

error: Content is protected !!
Scroll to Top