(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ.26. ಯೂನಿಫಾರ್ಮ್ ಧರಿಸಿಲ್ಲವೆಂದು ಖಾಸಗಿ ಕಾರಿನ ಚಾಲಕನೋರ್ವರಿಗೆ ಪೊಲೀಸರು ದಂಡ ವಿಧಿಸಿ ಟ್ರೋಲ್ ಗೆ ಒಳಗಾದ ಘಟನೆ ಬಂಟ್ವಾಳದಿಂದ ವರದಿಯಾಗಿದೆ.
ಟ್ಯಾಕ್ಸಿ ವಾಹನಕ್ಕೆ ಬಿಳಿ ಸಮವಸ್ತ್ರ ಧರಿಸಬೇಕೆಂಬ ಕಾನೂನು ಇದ್ದು, ಸಮವಸ್ತ್ರ ಧರಿಸಿಲ್ಲ ಎನ್ನುವ ಕಾರಣ ನೀಡಿ ಖಾಸಗಿ ವಾಹನ ಚಾಲಕರಿಗೆ ದಂಡ ವಿಧಿಸುವಂತಿಲ್ಲ. ಆದರೆ ಬಂಟ್ವಾಳ ಪೊಲೀಸರು ಖಾಸಗಿ ಕಾರು ಚಾಲಕರೋರ್ವರಿಗೆ ಸಮವಸ್ತ್ರ ಧರಿಸಿಲ್ಲವೆಂದು ತಪ್ಪಾಗಿ 500 ರೂ. ದಂಡ ವಿಧಿಸಿದ್ದು, ಕೊನೆಗೆ ಪೊಲೀಸ್ ವರಿಷ್ಠಾಧಿಕಾರಿಯವರ ಸೂಚನೆಯ ಮೇರೆಗೆ ಹಣವನ್ನು ಹಿಂತಿರುಗಿಸಿದ್ದಾರೆ. ಮಾ.23ರಂದು ಬಂಟ್ವಾಳದ ರಾಮಲ್‌ಕಟ್ಟೆ ಎಂಬಲ್ಲಿ ಹೆದ್ದಾರಿ ಗಸ್ತು ಪೊಲೀಸರು, ಪಾಣೆಮಂಗಳೂರು ಮೂಲದ ಕಾರು ಚಾಲಕರೊಬ್ಬರಿಗೆ 500 ರೂ.ದಂಡ ವಿಧಿಸಿದ್ದರು. ಪೊಲೀಸರು ನೀಡಿದ ದಂಡದ ರಶೀದಿಯನ್ನು ನೋಡಿದ ಅವರ ಪುತ್ರ ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಬಿ.ಎಂ.ಲಕ್ಷ್ಮೀ ಪ್ರಸಾದ್ ಅವರ ಗಮನಕ್ಕೆ ತಂದಿದ್ದರು. ತಕ್ಷಣವೇ ಸ್ಪಂದಿಸಿದ ಎಸ್ಪಿಯವರು ದಂಡದ ಹಣವನ್ನು ಹಿಂತಿರುಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.