(ನ್ಯೂಸ್ ಕಡಬ) newskadaba.com ಎಡಮಂಗಲ, ಮಾ. 26. ದಲಿತ ಮಹಿಳೆಯೋರ್ವರು ವಾಸಿಸುತ್ತಿದ್ದ ತಾತ್ಕಾಲಿಕ ಮನೆಯನ್ನು ಧ್ವಂಸ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಮಾ. 03 ರಂದು ರವಿ ಶೆಟ್ಟಿ ಮತ್ತು ವಿದ್ಯಾ ಶೆಟ್ಟಿ ಹಾಗೂ ಮತ್ತಿಬ್ಬರು ಎಡಮಂಗಲ ಗ್ರಾಮದ ಕಜೆತ್ತಡ್ಕ ಎಂಬಲ್ಲಿ ಬಾಲಕಿ ಎಂಬವರು 20 ವರ್ಷಗಳಿಂದ ವಾಸಿಸುತ್ತಿದ್ದ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬಾಲಕಿಯವರಿಗೆ ಬೈದು, ಜಾತಿಯನ್ನು ನಿಂದಿಸಿದ್ದಾರೆ. ಅಲ್ಲದೇ ಅವರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿರುವ ಮನೆಯನ್ನೂ ಧ್ವಂಸ ಮಾಡಿದ್ದಾರೆ ಎಂದು ಬಾಲಕಿ ತನ್ನ ದೂರಿನಲ್ಲಿ ಆರೋಪಿಸಿದ್ದರು. ಆರೋಪಿಗಳ ಪೈಕಿ ರವಿ ಮತ್ತು ವಿದ್ಯಾರವರು ನಿರೀಕ್ಷಣಾ ಜಾಮೀನು ಕೋರಿ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ಪುತ್ತೂರಿನ ವಕೀಲರಾದ ಎ.ದಿನಕರ ರೈ, ಅರುಣಾ ಡಿ.ರೈ , ಲೇಖಾ ಶ್ರೀ ಹಾಗೂ ಪ್ರಿಯಾ ವಾದಿಸಿದರು.