(ನ್ಯೂಸ್ ಕಡಬ) newskadaba.com ಕೊಣಾಜೆ, ಮಾ. 25. ಇಲ್ಲಿನ ಮಂಗಳೂರು ವಿವಿ ಕ್ಯಾಂಪಸ್ ಬಳಿಯಿರುವ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಅಪಾರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವುಗೈದು ಪರಾರಿಯಾಗಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಹಿರಿಯ ಕಾಂಗ್ರೆಸ್ ಮುಖಂಡ ಕೋಡಿಜಾಲ್ ಇಬ್ರಾಹಿಂ ಅವರ ಪುತ್ರ ಹಬೀಬ್ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದ್ದು, ಹಬೀಬ್ ಹಾಗೂ ಅವರ ಕುಟುಂಬ ಮನೆಯೊಳಗೆ ಇದ್ದಾಗಲೇ ರಾತ್ರಿ ವೇಳೆ ಕಳ್ಳತನ ನಡೆಸಿದ್ದಾರೆ. ಮನೆಯ ಮಹಡಿಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಕೋಣೆಯ ಕಪಾಟಿನಲ್ಲಿದ್ದ ಅಂದಾಜು 75 ಪವನ್ ಚಿನ್ನಾಭರಣ ಹಾಗೂ ಸುಮಾರು ಐದು ಲಕ್ಷ ವರೆಗಿನ ನಗದನ್ನು ದೋಚಿದ್ದಾರೆ ಎನ್ನಲಾಗಿದೆ. ಘಟನೆಯ ಕುರಿತು ಗುರುವಾರ ಬೆಳಗ್ಗೆಯಷ್ಟೇ ಮನೆಮಂದಿಗೆ ವಿಷಯ ಗೊತ್ತಾಗಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಮುಂದುವರಿಸಿದ್ದಾರೆ.