(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮಾ.25. ಕಂಟೇನರ್ ಲಾರಿ ಹಾಗೂ ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿ ಬೆಂಕಿಯುಂಟಾದ ಪರಿಣಾಮ ಲಾರಿ ಚಾಲಕ ಸಜೀವ ದಹನಗೊಂಡಿದ್ದು, ಬಸ್ ಸಂಪೂರ್ಣ ಭಸ್ಮಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೆಂಗಳೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಂಟೇನರ್ ಲಾರಿ ನಡುವೆ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಲಾರಿಗೆ ಬೆಂಕಿ ಹಿಡಿದಿದ್ದು, ಲಾರಿ ಚಾಲಕ ಹೊರಬರಲಾರದೆ ಸಜೀವ ದಹನವಾಗಿದ್ದಾರೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ತಕ್ಷಣವೇ ಹೊರಬಂದಿದ್ದು, ಬಸ್ಸು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ತಕ್ಷಣವೇ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ.